Karavali
ಉಡುಪಿ : ದಾಯ್ಜಿವರ್ಲ್ಡ್ ಸ್ವರ ಸಾಗರ-2; ನೋಂದಣಿ ಆರಂಭ, ಆಗಸ್ಟ್ 1 ಕೊನೆಯ ದಿನ
- Thu, Jul 09 2026 02:39:12 PM
-
ಉಡುಪಿ, ಜು. 09 (DaijiworldNews/AA): ಪ್ರತಿಭೆಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿರುವ ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ವತಿಯಿಂದ ಸಂಗೀತ ಪ್ರತಿಭೆಗಳಿಗೆ ಮತ್ತೊಂದು ಹೊಸ ವೇದಿಕೆ ಸಿದ್ದವಾಗಿದೆ. ದಾಯ್ಜಿವರ್ಲ್ಡ್ ಸ್ವರ ಸಾಗರ ಮೊದಲ ಸೀಸನ್ನ ಅಭೂತಪೂರ್ವ ಯಶಸ್ಸಿನ ಬಳಿಕ ಇದೀಗ ದಾಯ್ಜಿವರ್ಲ್ಡ್ ಸ್ವರ ಸಾಗರ ಎರಡನೇ ಸೀಸನ್ ಅನಾವರಣಗೊಂಡಿದ್ದು, ಈಗಾಗಲೇ ನೋಂದಣಿ ಪ್ರಕ್ರಿಯೆ ಭರದಿಂದ ಸಾಗುತ್ತಿದೆ.











ದಾಯ್ಜಿವರ್ಲ್ಡ್ ಸ್ವರ ಸಾಗರದ ಮೊದಲ ಆವೃತ್ತಿಯಲ್ಲಿ ನೂರಾರು ಮಂದಿ ಸ್ಪರ್ಧಾಳುಗಳು ಭಾಗವಹಿಸಿದ್ದರು. ಕಿಶೂ ಎಂಟರ್ಪ್ರೈಸಸ್ ಬ್ಯಾನರ್ ಅಡಿಯಲ್ಲಿ ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋ ಆಯೋಜಿಸಿರುವ ಈ ಸ್ಪರ್ಧೆಯಲ್ಲಿ ಉದಯೋನ್ಮುಖ ಗಾಯಕರು ತಮ್ಮ ಗಾಯನ ಪ್ರತಿಭೆಯನ್ನು ಪ್ರದರ್ಶಿಸಲು ಒಂದು ಸುವರ್ಣ ವೇದಿಕೆಯನ್ನು ನೀಡುತ್ತದೆ.
ದಾಯ್ಜಿವರ್ಲ್ಡ್ ಸ್ವರ ಸಾಗರ ಸೀಸನ್ -2 ರ ಪೋಸ್ಟರ್ ಅನ್ನು ಉಡುಪಿಯ ಕಡಿಯಾಳಿಯ ಮಾಂಡವಿ ಸಭಾ ಭವನದಲ್ಲಿ ಹೆಸರಾಂತ ನಿರೂಪಕ ಆಲ್ವಿನ್ ದಾಂತಿ ಪೆರ್ನಾಲ್ ಅನಾವರಣಗೊಳಿಸಿದರು,
ಮಣಿಪಾಲದ ಮಾಹೆಯ ಮಣಿಪಾಲ ಕಾಲೇಜ್ ಆಫ್ ಫಾರ್ಮಾಸ್ಯುಟಿಕಲ್ ಸೈನ್ಸಸ್ನ ಔಷಧಶಾಸ್ತ್ರ ವಿಭಾಗದ ಪ್ರಾಧ್ಯಾಪಕರಾಗಿರುವ ಹಾಗೂ ಎಜಿಇ (AGE), ಮಣಿಪಾಲದ ಆಡಳಿತಾಧಿಕಾರಿಯಾಗಿರುವ ಡಾ. ಕೆ. ಶ್ರೀಧರ್ ರಂಗನಾಥ್ ಪೈ ಅವರು ದಾಯ್ಜಿವರ್ಲ್ಡ್ ಸ್ವರ ಸಾಗರ ಎರಡನೇ ಆವೃತ್ತಿಯ ಮುಖ್ಯ ತೀರ್ಪುಗಾರ ಯಶವಂತ್ ಎಂ. ಜಿ. ಅವರಿಗೆ ಅಧಿಕೃತವಾಗಿ ಮೈಕ್ರೋಫೋನ್ ಹಸ್ತಾಂತರಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ದಾಯ್ಜಿವರ್ಲ್ಡ್ ಸ್ವರ ಸಾಗರ ಎರಡನೇ ಆವೃತ್ತಿಯ ತೀರ್ಪುಗಾರ ಯಶವಂತ್ ಎಂ. ಜಿ., ಮತ್ತೊಮ್ಮೆ ಈ ಜವಾಬ್ದಾರಿಯನ್ನು ವಹಿಸುವ ಅವಕಾಶ ನೀಡಿದ ದಾಯ್ಜಿವರ್ಲ್ಡ್ ಉಡುಪಿಗೆ ಕೃತಜ್ಞತೆ ಸಲ್ಲಿಸಿದರು.
"ದಾಯ್ಜಿವರ್ಲ್ಡ್ ಉಡುಪಿ ನನ್ನ ಮೇಲೆ ವಿಶ್ವಾಸವಿಟ್ಟು ಮತ್ತೊಮ್ಮೆ ಈ ಅವಕಾಶ ನೀಡಿದೆ. ಅದಕ್ಕಾಗಿ ನಾನು ಅವರಿಗೆ ಋಣಿಯಾಗಿದ್ದೇನೆ. ಮೊದಲ ಸೀಸನ್ನಲ್ಲಿ ದೇಶದ ವಿವಿಧ ಭಾಗಗಳಿಂದ ಸ್ಪರ್ಧಿಗಳು ಆಡಿಷನ್ಗೆ ಆಗಮಿಸಿದ್ದರು. ಸಂಗೀತವು ಹೃದಯಗಳನ್ನು ಬೆಸೆಯುವ ಮತ್ತು ಜನರನ್ನು ಒಗ್ಗೂಡಿಸುವ ಅದ್ಭುತ ಶಕ್ತಿಯನ್ನು ಹೊಂದಿದೆ. ಎರಡನೇ ಸೀಸನ್ ಘೋಷಣೆಯಾದಾಗ ಮತ್ತೊಮ್ಮೆ ಅದರ ಭಾಗವಾಗುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ. ದಾಯ್ಜಿವರ್ಲ್ಡ್ ಉಡುಪಿ ಆಯೋಜಿಸುವ ಪ್ರತಿಯೊಂದು ಕಾರ್ಯಕ್ರಮವೂ ನ್ಯಾಯಸಮ್ಮತ ಹಾಗೂ ಪಾರದರ್ಶಕವಾಗಿ ನಡೆಯುತ್ತದೆ. ಪ್ರತಿಭಾವಂತರನ್ನು ಗುರುತಿಸಿ ಬೆಳಕಿಗೆ ತರುವುದು ಅವರ ಮುಖ್ಯ ಉದ್ದೇಶವಾಗಿದೆ," ಎಂದು ಹೇಳಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಮಾತನಾಡಿದ ಡಾ. ಕೆ. ಶ್ರೀಧರ್ ರಂಗನಾಥ್ ಪೈ ಅವರು, "ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆ ಯಕ್ಷಗಾನ ಮತ್ತು ತಾಳಮದ್ದಲೆ ಕ್ಷೇತ್ರಕ್ಕೆ ಅಪಾರ ಕೊಡುಗೆ ನೀಡಿದ ಅನೇಕ ಮಹನೀಯರನ್ನು ನೀಡಿದೆ. ಗೋವಿಂದ ಭಟ್, ಕುಂಬಳೆ ಸುಂದರ್ ರಾವ್, ನಾರಾಯಣ ಹೆಗಡೆ, ಗೋಪಾಲಕೃಷ್ಣ ಭಟ್ ಸೇರಿದಂತೆ ಹಲವರು ಕನ್ನಡ ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ್ದಾರೆ. ಸಂಗೀತವೂ ವಾಗ್ದೇವಿಯ ದೈವಿಕ ಅಭಿವ್ಯಕ್ತಿಯಾಗಿದೆ. ಅದು ಭಾವನೆಗಳನ್ನು ವ್ಯಕ್ತಪಡಿಸುವ ಶಕ್ತಿಶಾಲಿ ಕಲೆಯಾಗಿದ್ದು, ಏಕಾಗ್ರತೆ ಹಾಗೂ ಸೃಜನಶೀಲತೆಯನ್ನು ಬೆಳೆಸುತ್ತದೆ. ಇಂತಹ ವೇದಿಕೆಗಳು ಉದಯೋನ್ಮುಖ ಗಾಯಕರಿಗೆ ತಮ್ಮ ಪ್ರತಿಭೆಯನ್ನು ಪ್ರದರ್ಶಿಸಿ ಆತ್ಮವಿಶ್ವಾಸದಿಂದ ಮುನ್ನಡೆಯಲು ಅವಕಾಶ ಕಲ್ಪಿಸುತ್ತವೆ," ಎಂದು ಹೇಳಿದರು.
ಕಾರ್ಯಕ್ರಮವನ್ನು ತೇಜೇಶ್ ಬಂಗೇರ ನಿರೂಪಿಸಿದರು. ಮಿಥಾಲಿ ಶೆಟ್ಟಿ ವಂದಿಸಿದರು.
ಸಂಶೋಧನಾ ವಿದ್ಯಾರ್ಥಿ ಹಾಗೂ ಅಭಿವ್ಯಕ್ತ ಕಾರ್ಯಕ್ರಮದ ತೀರ್ಪುಗಾರ ಶ್ರೇಯಸ್ ಕೋಟ್ಯಾನ್, ರಾಜಕೀಯ ವಕ್ತಾರೆ ಹಾಗೂ ಅಭಿವ್ಯಕ್ತ ಗ್ರ್ಯಾಂಡ್ ಫಿನಾಲೆ ತೀರ್ಪುಗಾರಾದ ನಿತಾ ಪ್ರಭು, ಉದ್ಯಮಿ ಮತ್ತು ದಾನಿಗಳಾದ ಜೋಸೆಫ್ ಮೆನೇಜಸ್ ಸಾಸ್ತಾನ್, ಕಿಶೂ ಎಂಟರ್ಪ್ರೈಸಸ್ನ ವ್ಯವಸ್ಥಾಪಕ ನಿರ್ದೇಶಕ ಕಿಶೋರ್ ಗೊನ್ಸಾಲ್ವಿಸ್, ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದ ವ್ಯವಸ್ಥಾಪಕ ಕೆವಿನ್ ರೋಡ್ರಿಗಸ್, ಸಿಬ್ಬಂದಿ ವರ್ಗ ಹಾಗೂ ಇತರರು ಉಪಸ್ಥಿತರಿದ್ದರು.
ಸಂಗೀತದ ಸ್ವರ, ಲಯ ಹಾಗೂ ಇತರ ಮೂಲಭೂತ ಅಂಶಗಳ ಬಗ್ಗೆ ಕನಿಷ್ಠ ಜ್ಞಾನ ಹೊಂದಿರುವ 16 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದು. ಸ್ಪರ್ಧಿಗಳು ಆಡಿಷನ್ ಹಾಗೂ ನಂತರದ ಎಲ್ಲಾ ಸುತ್ತುಗಳಲ್ಲಿ ಭಾಗವಹಿಸಲಿದ್ದು, ಅವುಗಳನ್ನು ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ ಚಿತ್ರೀಕರಿಸಲಾಗುತ್ತದೆ.
ಆಡಿಷನ್ 2026ರ ಆಗಸ್ಟ್ 9ರಂದು, ಭಾನುವಾರ, ಉಡುಪಿಯ ಕಡಿಯಾಳಿಯ ಮಾಂಡವಿ ಸಭಾಭವನದಲ್ಲಿ ನಡೆಯಲಿದೆ.
ನಿಯಮಗಳು:
* 16 ವರ್ಷ ಮೇಲ್ಪಟ್ಟವರಿಗೆ ಅವಕಾಶ.
* ಸಂಗೀತದ ಜ್ಞಾನ ಹೊಂದಿರಬೇಕು. (ಶೃತಿ, ತಾಳ, ಲಯ)
* ಆಡಿಷನ್ನಲ್ಲಿ ಒಬ್ಬರಿಗೆ 2-3 ನಿಮಿಷಗಳ ಕಾಲ ಹಾಡಲು ಅವಕಾಶವಿರುತ್ತದೆ.
* ಆಡಿಷನ್ ಸುತ್ತುಗಳಲ್ಲಿ ಸ್ಪರ್ಧಿಗಳು ಯಾವುದೇ ಭಾಷೆಯ ಹಾಡುಗಳನ್ನು ಹಾಡಬಹುದು. ಆದರೆ ಮುಂದಿನ ಸುತ್ತುಗಳಲ್ಲಿ ಭಾಷೆಗೆ ಸಂಬಂಧಿಸಿದ ನಿಯಮಗಳು ಅನ್ವಯವಾಗುತ್ತವೆ..
* ಆಡಿಷನ್ ಸುತ್ತಿನಲ್ಲಿ ಕೀಬೋರ್ಡ್ ಅನ್ನು ಕಾರ್ಯಕ್ರಮದ ಆಯೋಜಕರು ಒದಗಿಸಲಿದ್ದಾರೆ.
* ಯಾವುದೇ ವ್ಯಕ್ತಿಯ ನಿಂದನೆ ಹಾಗೂ ಜಾತಿ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ತರುವ ಹಾಡುಗಳನ್ನು ಹಾಡುವಂತಿಲ್ಲ.
* ಆಡಿಶನ್ನಲ್ಲಿ ಸ್ಪರ್ಧಿಯು ಹಾಡುವ ಹಾಡಿನ Youtube ಲಿಂಕನ್ನು ನೋಂದಾವಣೆ ಸಮಯದಲ್ಲಿ ಲಗತ್ತಿಸತಕ್ಕದ್ದು.
* ಆಡಿಶನ್ನಲ್ಲಿ ಭಾಗವಹಿಸಿದ ಎಲ್ಲಾ ಸ್ಪರ್ಧಿಗಳಿಗೂ ಪ್ರಮಾಣ ಪತ್ರ ನೀಡಲಾಗುವುದು.
* ಮುಂದಿನ ಹಂತಕ್ಕೆ ಆಯ್ಕೆಯಾದ ಸ್ಪರ್ಧಿಗಳು ರೆಕಾರ್ಡಿಂಗ್ ಇರುವ ದಿನ ಕಡ್ಡಾಯವಾಗಿ ಹಾಜರಿರತಕ್ಕದ್ದು. ಮರು ಅವಕಾಶ ನೀಡಲಾಗುವುದಿಲ್ಲ.
* ಸ್ಪರ್ಧೆಯು ವಿವಿಧ ಹಂತಗಳಲ್ಲಿ ನಡೆಯಲಿದ್ದು, ಈ ಸ್ಪರ್ಧೆಯ ಎಲ್ಲಾ ರೆಕಾರ್ಡಿಂಗ್ ಅನ್ನು ದಾಯ್ಜಿವರ್ಲ್ಡ್ ಉಡುಪಿ ಸ್ಟುಡಿಯೋದಲ್ಲಿ ನಡೆಸಲಾಗುತ್ತದೆ.
* ದಾಯ್ಜಿವರ್ಲ್ಡ್ ಸ್ವರ ಸಾಗರ ಮೊದಲ ಆವೃತ್ತಿಯ ಫೈನಲ್ ಹಂತದ ಸ್ಪರ್ಧಿಗಳು, ಎರಡನೇ ಆವೃತ್ತಿಯಲ್ಲಿ ಭಾಗವಹಿಸಲು ಅವಕಾಶ ಇಲ್ಲ.
* ತೀರ್ಪುಗಾರರ ತೀರ್ಮಾನವೇ ಅಂತಿಮ.
* ಯಾವುದೇ ಸಂದರ್ಭದಲ್ಲಿ ಕಾರ್ಯಕ್ರಮದಲ್ಲಿನ ಬದಲಾವಣೆ ಹಾಗೂ ಕಾರ್ಯಕ್ರಮವನ್ನು ರದ್ದುಮಾಡುವ ಎಲ್ಲಾ ಹಕ್ಕುಗಳನ್ನು ಕಾರ್ಯಕ್ರಮದ ಆಯೋಜಕರು ಹೊಂದಿರುತ್ತಾರೆ.ಸ್ಪರ್ಧೆಯಲ್ಲಿ ಭಾಗವಹಿಸುವವರು ಈ ಕೆಳಗಿನ ಲಿಂಕ್ ಮೂಲಕ ನೋಂದಾಯಿಸಿಕೊಳ್ಳಿ:
www.daijiworldudupi.com/dss2
ನೊಂದಾವಣೆ ಶುಲ್ಕ: ₹200 ರೂಪಾಯಿ
ವಿಜೇತರಿಗೆ ಒಟ್ಟು 1 ಲಕ್ಷ ಮೌಲ್ಯದ ಬಹುಮಾನ
ನೋಂದಾವಣೆಗೆ ಕೊನೆಯ ದಿನಾಂಕ: ಆಗಸ್ಟ್ 01, 2026
ಆಡಿಷನ್ ದಿನಾಂಕ: ಆಗಸ್ಟ್ 09, 2026
ಸ್ಥಳ: ಮಾಂಡವಿ ಸಭಾ ಭವನ ಕಡಿಯಾಳಿ, ಉಡುಪಿ