ಉಡುಪಿ, ಮೇ. 31 (DaijiworldNews/AA): ವ್ಯಕ್ತಿಯೊಬ್ಬರು ತನ್ನ ತೋಟದಲ್ಲಿರುವ ಬಾವಿಯ ಕೆಸರು ತೆಗೆಯಲು ಹೋಗಿ ಆಕಸ್ಮಿಕವಾಗಿ ಕೈಜಾರಿ ಬಾವಿಗೆ ಬಿದ್ದು ಗಂಭೀರ ಗಾಯಗೊಂಡು ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಉಡುಪಿ ಜಿಲ್ಲೆಯ ಶಂಕರನಾರಾಯಣ ಸಮೀಪ ನಡೆದಿದೆ.

ಪದ್ದು ಕುಂಬಾರ ಮೃತ ದುರ್ದೈವಿ.
ದೂರುದಾರರಾದ ಮೃತರ ಪುತ್ರ ಹೆಬ್ರಿ ಬೆಳ್ವೆ ಗ್ರಾಮದ ನಿವಾಸಿ ಮಂಜುನಾಥ ಕುಂಬಾರ ಅವರು, ತಂದೆಯೊಂದಿಗೆ ಮೇ 27ರಂದು ಬೆಳಗ್ಗೆ 9:30 ಗಂಟೆಗೆ ತೋಟದಲ್ಲಿರುವ ಬಾವಿಯ ಕೆಸರನ್ನು ತೆಗೆಯಲು ಕೆಲಸದವರನ್ನು ಕರೆದುಕೊಂಡು ತೋಟದಲ್ಲಿದ್ದ ಬಾವಿಗೆ ಹೋಗಿರುತ್ತಾರೆ. ಈ ವೇಳೆ ಬಾವಿಗೆ ಇಳಿದು ಕೆಸರನ್ನು ತೆಗೆದು ಮೇಲಕ್ಕೆ ಹಾಕಿ ಹಗ್ಗದ ಸಹಾಯದಿಂದ ಮೇಲಕ್ಕೆ ಬರುವ ವೇಳೆ ಹಗ್ಗವು ಕೆಸರಾಗಿದ್ದರಿಂದ ಆಕಸ್ಮಿಕವಾಗಿ ಕೈಜಾರಿ ಪುನಃ ಬಾವಿಗೆ ಬಿದ್ದಿದ್ದಾರೆ.
ಈ ವೇಳೆ ಅಲ್ಲಿ ನಿಂತಿದ್ದ ಮೃತರ ಪತ್ನಿ ಗಿರಿಜಾ ರವರು ದೂರುದಾರರಾದ ಮಂಜುನಾಥ ಕುಂಬಾರ ಹಾಗೂ ಶೇಖರ್ ರವರನ್ನು ಕೂಗಿ ಕರೆದಿದ್ದಾರೆ. ಬಳಿಕ ಅವರು ಪದ್ದು ಕುಂಬಾರ್ ಅವರನ್ನು ಬಾವಿಯಿಂದ ಮೇಲಕ್ಕೆತ್ತಿ ಉಪಚರಿಸಿದ್ದಾರೆ. ನಂತರ ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಕೋಟೇಶ್ವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
ಬಳಿಕ ಪದ್ದು ಕುಂಬಾರ್ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲದ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಅವರು ಮೇ 30 ರಂದು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇನ್ನು ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.