ಉಡುಪಿ, ಮೇ. 31 (DaijiworldNews/TA) : ಸರಕು ಸಾಗಾಟದ ಲಾರಿ ಮತ್ತು ಗೂಡ್ಸ್ ಟೆಂಪೋ ಮಧ್ಯೆ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗೂಡ್ಸ್ ಟೆಂಪೋ ಚಾಲಕ ಸ್ಥಳದಲ್ಲೇ ಮೃತಪಟ್ಟ ಘಟನೆ ರಾಷ್ಟ್ರೀಯ ಹೆದ್ದಾರಿ 66ರ ಉಡುಪಿಯ ಕಿನ್ನಿಮೂಲ್ಕಿ ಬಳಿ ರವಿವಾರ ನಸುಕಿನ ಜಾವ ಸಂಭವಿಸಿದೆ. ಮೃತರನ್ನು ಶಿವಮೊಗ್ಗ ಮೂಲದ ಪ್ರಶಾಂತ್ ಪಿ. (29) ಎಂದು ಗುರುತಿಸಲಾಗಿದೆ.

ನಿಲ್ಲಿಸಿದ್ದ ಲಾರಿಗೆ ಹಿಂದಿನಿಂದ ಗೂಡ್ಸ್ ಟೆಂಪೋ ಢಿಕ್ಕಿ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಅಪಘಾತದ ತೀವ್ರತೆಗೆ ಟೆಂಪೋ ಮುಂಭಾಗ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಅದರೊಳಗೆ ಸಿಲುಕಿದ್ದ ಪ್ರಶಾಂತ್ ಮೃತದೇಹ ಹೊರತೆಗೆಯಲು ಸಾಹಸ ಪಡಬೇಕಾಯಿತು. ಸಮಾಜಸೇವಕ ನಿತ್ಯಾನಂದ ಒಳಕಾಡು, ಸಂಚಾರ ಠಾಣೆಯ ಪೋಲಿಸರು ಹಾಗೂ ಸ್ಥಳೀಯರು ಮೃತದೇಹವನ್ನು ಹೊರತೆಗೆದು ಅಜ್ಜರಕಾಡು ಜಿಲ್ಲಾಸ್ಪತ್ರೆಯ ರವಾನಿಸಿದರು.