ಕಾರ್ಕಳ, ಮೇ. 20 (DaijiworldNews/AA): ಕಾರ್ಕಳ ಪುರಸಭಾ ವ್ಯಾಪ್ತಿಯ ರಾಜ್ಯ ಹೆದ್ದಾರಿಯಾದ ಆನೆಕೆರೆಯಿಂದ ಪುಲ್ಕೇರಿ ಬೈಪಾಸ್ಗೆ ಸಂಪರ್ಕಿಸುವ ರಸ್ತೆಯಲ್ಲಿರುವ ಶ್ರೀ ಕೃಷ್ಣ ಎನ್ಕ್ಲೆವ್ ಕಟ್ಟಡ ಸಮುಚ್ಚಯದ ಮುಂಭಾಗದಲ್ಲಿ ನಡೆದ ಮೋರಿ ಕಾಮಗಾರಿಯಿಂದಾಗಿ ವಾಹನ ಸವಾರರು ತೀವ್ರ ತೊಂದರೆ ಅನುಭವಿಸುತ್ತಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.



ಕಳೆದ ಎರಡು ತಿಂಗಳುಗಳಿಂದ ರಸ್ತೆ ಮಧ್ಯದಲ್ಲಿ ಮೋರಿ ಕಾಮಗಾರಿ ನಡೆಯುತ್ತಿದ್ದ ಹಿನ್ನೆಲೆ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗಿತ್ತು. ಇದೀಗ ಕಾಮಗಾರಿ ಪೂರ್ಣಗೊಂಡಿದ್ದರೂ ಗುತ್ತಿಗೆದಾರರ ಅಸಮರ್ಪಕ ಹಾಗೂ ಅವೈಜ್ಞಾನಿಕ ಕಾಮಗಾರಿಯಿಂದ ಪರಿಸ್ಥಿತಿ ಮತ್ತಷ್ಟು ಹದಗೆಟ್ಟಿದೆ ಎಂದು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇತ್ತೀಚೆಗೆ ಸುರಿದ ಮಳೆಯಿಂದ ರಸ್ತೆ ಸಂಪೂರ್ಣ ರಾಡಿಯಾಗಿದ್ದು, ಮೋರಿ ಕಾಮಗಾರಿ ನಡೆದ ಸ್ಥಳದಲ್ಲಿ ಸಮರ್ಪಕವಾಗಿ ಡಾಮರೀಕರಣ ಮಾಡದ ಕಾರಣ ರಸ್ತೆ ಮಧ್ಯದಲ್ಲಿ ಹೊಂಡಗಳು ನಿರ್ಮಾಣವಾಗಿ ಡಾಮಾರು ಕಿತ್ತು ಹೋಗಿದೆ. ಇದರ ಪರಿಣಾಮ ಕಾರ್ಕಳ ನಗರ ಪ್ರವೇಶಿಸುವ ಹಾಗೂ ಕಾರ್ಕಳದಿಂದ ಬಜಗೋಳಿ, ನಿಟ್ಟೆ, ಮೂಡಬಿದ್ರೆ ಕಡೆಗೆ ಸಂಚರಿಸುವ ಬಸ್, ಲಾರಿ ಹಾಗೂ ಖಾಸಗಿ ವಾಹನಗಳ ಚಾಲಕರು ಭಾರೀ ಸಂಕಷ್ಟ ಅನುಭವಿಸುತ್ತಿದ್ದಾರೆ.
ಈ ಕುರಿತು ಪರಿಸರದ ನಿವಾಸಿಗಳು ಈಗಾಗಲೇ ಪುರಸಭೆ ಅಧಿಕಾರಿಗಳು ಹಾಗೂ ಸ್ಥಳೀಯ ನಿಕಟಪೂರ್ವ ಪುರಸಭಾ ಸದಸ್ಯರ ಗಮನಕ್ಕೆ ತಂದಿದ್ದರೂ ಯಾವುದೇ ಕ್ರಮ ಕೈಗೊಳ್ಳಲಾಗಿಲ್ಲ. ಕಳೆದ ಎರಡು-ಮೂರು ದಿನಗಳಿಂದ ಸುರಿದ ಮಳೆಯಿಂದ ಪರಿಸರದಲ್ಲಿ ಕೆಸರು ಮತ್ತು ರಾಡಿ ಹೆಚ್ಚಾಗಿದ್ದು, ನಡೆದಾಡುವ ಸಾರ್ವಜನಿಕರು ಜಾರಿ ಬಿದ್ದು ಗಾಯಗೊಂಡ ಘಟನೆಗಳೂ ನಡೆದಿವೆ ಎನ್ನಲಾಗಿದೆ. ಜೊತೆಗೆ ವಾಹನ ಅಪಘಾತಗಳ ಸಂಭವವೂ ಹೆಚ್ಚಾಗಿದೆ ಎಂದು ದೂರಿದ್ದಾರೆ.
ಮೋರಿ ಕಾಮಗಾರಿ ನಡೆಯುತ್ತಿದ್ದ ಅವಧಿಯಲ್ಲಿ ನಿರಂತರ ವಾಹನ ಸಂಚಾರ ತಡೆ ಉಂಟಾಗಿ ಸಾರ್ವಜನಿಕರು ಹಾಗೂ ವಾಹನ ಸವಾರರು ತೀವ್ರ ತೊಂದರೆ ಅನುಭವಿಸಿದ್ದರು. ಕಾಮಗಾರಿ ಪೂರ್ಣಗೊಂಡ ಬಳಿಕ ಪರಿಸ್ಥಿತಿ ಸುಧಾರಿಸಬಹುದು ಎಂದು ನಿರೀಕ್ಷಿಸಲಾಗಿದ್ದರೂ, ಕಳಪೆ ಕಾಮಗಾರಿಯಿಂದ ಇದೀಗ ವಾಹನ ಸವಾರರ ಪರಿಸ್ಥಿತಿ 'ಬಾಣಲೆಯಿಂದ ಬೆಂಕಿಗೆ ಬಿದ್ದಂತಾಗಿದೆ' ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಇನ್ನು ಒಂದು ವಾರದೊಳಗೆ ಮುಂಗಾರು ಮಳೆ ಆರಂಭವಾಗುವ ಸಾಧ್ಯತೆ ಇರುವ ಹಿನ್ನೆಲೆ, ನಿರಂತರ ಮಳೆಯಿಂದ ರಸ್ತೆ ಪರಿಸ್ಥಿತಿ ಮತ್ತಷ್ಟು ಹದಗೆಟ್ಟು ವಾಹನ ಸಂಚಾರಕ್ಕೆ ದೊಡ್ಡ ಮಟ್ಟದ ತೊಂದರೆ ಉಂಟಾಗುವ ಹಾಗೂ ಅಪಘಾತಗಳ ಸಂಖ್ಯೆ ಹೆಚ್ಚಾಗುವ ಆತಂಕ ವ್ಯಕ್ತವಾಗಿದೆ. ಹೀಗಾಗಿ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಕಳಪೆ ಮತ್ತು ಅವೈಜ್ಞಾನಿಕ ಕಾಮಗಾರಿಯನ್ನು ಸರಿಪಡಿಸಬೇಕು. ಇಲ್ಲವಾದಲ್ಲಿ ಪರಿಸರದ ನಾಗರಿಕರು ಒಟ್ಟಾಗಿ ಭಾರೀ ಪ್ರತಿಭಟನೆ ನಡೆಸಲು ಸಿದ್ಧರಾಗಿದ್ದಾರೆ ಎಂದು ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.