ಕಾರ್ಕಳ, ಮೇ. 19 (DaijiworldNews/AK): ಜಿಲ್ಲಾ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಸಹಾಯಕ ಅಧಿಕಾರಿಗಳ ಮೇಲೆ ದರ್ಪ ತೋರಿಸುವ ಮೂಲಕ ಶಾಸಕ ಸುನೀಲ್ ಕುಮಾರ್ ತಮ್ಮ ವೈಫಲ್ಯವನ್ನು ಸಾರ್ವಜನಿಕವಾಗಿ ಪ್ರದರ್ಶಿಸಿದ್ದಾರೆ ಎಂದು ಕಾರ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶುಭದ ರಾವ್ ಆರೋಪಿಸಿದ್ದಾರೆ.

ಜಿಲ್ಲಾ ಉಸ್ತುವಾರಿ ಸಚಿವರ ನೇತೃತ್ವದಲ್ಲಿ ನಡೆದ ಕೆಡಿಪಿ ಸಭೆಯಲ್ಲಿ ಶಾಸಕ ಸುನೀಲ್ ಕುಮಾರ್ ಅವರು ಯಾವುದೋ ವಾಟ್ಸಪ್ ಯೂನಿವರ್ಸಿಟಿಯ ಫೋಟೋ ಹಿಡಿದು “ನನ್ನ ಹಕ್ಕುಗಳ ಉಲ್ಲಂಘನೆಯಾಗಿದೆ” ಎಂದು ಅಧಿಕಾರಿಗಳ ವಿರುದ್ಧ ದರ್ಪ ತೋರಿರುವುದು, ಅವರ 21 ವರ್ಷದ ಶಾಸಕತ್ವದ ಅಹಂಕಾರವನ್ನು ತೋರಿಸುತ್ತದೆ ಎಂದು ಅವರು ಟೀಕಿಸಿದ್ದಾರೆ.
ಕಾರ್ಕಳ ವಿಧಾನಸಭಾ ಕ್ಷೇತ್ರದ ನೂರಾರು ಸಾರ್ವಜನಿಕರು ಹಕ್ಕುಪತ್ರಗಳಿಗಾಗಿ ಶಾಸಕರ ಕಚೇರಿಗೆ ಅಲೆದಾಡುವುದು ದಿನನಿತ್ಯದ ಗೋಳಾಗಿದೆ. ಎರಡು ದಶಕಗಳಿಂದ ಅಧಿಕಾರದಲ್ಲಿದ್ದರೂ ಬಡವರ ಕೆಲಸಗಳನ್ನು ಮಾಡಿಕೊಡದೆ ಅವರನ್ನು ಕಚೇರಿಗೆ ಸುತ್ತುವಂತೆ ಮಾಡಿರುವುದು ಅಕ್ಷಮ್ಯ ಎಂದು ಶುಭದ ರಾವ್ ಹೇಳಿದ್ದಾರೆ.
ಹಲವಾರು ವರ್ಷಗಳಿಂದ ಹಕ್ಕುಪತ್ರಕ್ಕಾಗಿ ಶಾಸಕರ ಕಚೇರಿ ಸುತ್ತಿದ್ದ ನಿಟ್ಟೆಯ ಹಿರಿಯ ನಾಗರಿಕ ಸುರೇಶ್ ಆಚಾರ್ಯರಿಗೆ ತಹಶೀಲ್ದಾರರ ಮೂಲಕ ಹಕ್ಕುಪತ್ರ ದೊರೆತಿರುವುದು ಸುನೀಲ್ ಕುಮಾರ್ ಅವರ ಕೆಂಗಣ್ಣಿಗೆ ಗುರಿಯಾಗಿರುವುದು ವಿಪರ್ಯಾಸ ಎಂದು ಅವರು ತಿಳಿಸಿದ್ದಾರೆ.
ಇತ್ತೀಚೆಗೆ ಮಗನನ್ನು ಕಳೆದುಕೊಂಡು ವಾಸಿಸಲು ಸೂರಿಲ್ಲದೆ ಸಂಕಷ್ಟದಲ್ಲಿದ್ದ ಕುಟುಂಬವೊಂದು ಮನೆ ನಿರ್ಮಾಣಕ್ಕಾಗಿ ಹಲವು ಕಚೇರಿಗಳಿಗೆ ಅಲೆದಾಡಿ, ಕೊನೆಗೆ ಸರ್ಕಾರಿ ಅಧಿಕಾರಿಗಳ ಸಹಕಾರದಿಂದ ಹಕ್ಕುಪತ್ರ ಪಡೆದು ನಿಟ್ಟುಸಿರು ಬಿಟ್ಟಿತ್ತು. ಆದರೆ ಬಡವರ ಸಮಸ್ಯೆಗೆ ಸ್ಪಂದಿಸುವ ಬದಲು, ಹಕ್ಕುಪತ್ರ ನೀಡಿರುವುದನ್ನೇ ದೊಡ್ಡ ಅಪರಾಧವೆಂಬಂತೆ ಸಭೆಯಲ್ಲಿ ಕೂಗಾಡಿರುವುದು ಶಾಸಕರ ಬಡವರ ವಿರೋಧಿ ಮನಸ್ಥಿತಿಯನ್ನು ತೋರಿಸುತ್ತದೆ ಎಂದು ಅವರು ಆರೋಪಿಸಿದ್ದಾರೆ.
“ಜನಸಾಮಾನ್ಯರ ಪರವಾಗಿ ಕೆಲಸ ಮಾಡುವ ಪ್ರಾಮಾಣಿಕ ಸರ್ಕಾರಿ ಅಧಿಕಾರಿಗಳ ಜೊತೆ ಕಾರ್ಕಳದ ಜನತೆ ಸದಾ ನಿಲ್ಲಲಿದೆ,” ಎಂದು ಶುಭದ ರಾವ್ ಹೇಳಿದ್ದಾರೆ. ಎರಡು ದಶಕಗಳಿಂದ ಆ ಕುಟುಂಬಕ್ಕೆ ಹಕ್ಕುಪತ್ರ ಯಾಕೆ ನೀಡಲಿಲ್ಲ ಎಂಬುದಕ್ಕೆ ಮೊದಲು ಉತ್ತರಿಸಬೇಕು. ಬಡವರು ಬದುಕಿನ ಹಕ್ಕಿಗಾಗಿ ಹೋರಾಡುತ್ತಿರುವಾಗ, ಶಾಸಕರು ಅಧಿಕಾರದ ಹಕ್ಕಿಗಾಗಿ ಸಭೆಯಲ್ಲಿ ಕೂಗಾಡಿರುವುದು ಅವರ ಅಧಿಕಾರದ ಹಪಹಪಿಯನ್ನು ತೋರಿಸುತ್ತದೆ ಎಂದು ಅವರು ಹೇಳಿದ್ದಾರೆ.
ಶಿಷ್ಟಾಚಾರದ ಬಗ್ಗೆ ಮಾತನಾಡುವ ಶಾಸಕ ಸುನೀಲ್ ಕುಮಾರ್ ಅವರು ಕಾರ್ಕಳದಲ್ಲಿ ನಡೆದ ಗುದ್ದಲಿ ಪೂಜೆ ಕಾರ್ಯಕ್ರಮಗಳಲ್ಲಿ ಎಷ್ಟು ಬಾರಿ ಶಿಷ್ಟಾಚಾರ ಪಾಲಿಸಿದ್ದಾರೆ ಎಂದು ಪ್ರಶ್ನಿಸಿದ ಶುಭದ ರಾವ್, ಕಾಂಗ್ರೆಸ್ ಪಕ್ಷದ ವಿಧಾನಪರಿಷತ್ ಸದಸ್ಯ ಮಂಜುನಾಥ ಭಂಡಾರಿ, ಜಿಲ್ಲಾ ಉಸ್ತುವಾರಿ ಸಚಿವರು, ತಮ್ಮದೇ ಪಕ್ಷದ ಸಂಸದ ಕೋಟ ಶ್ರೀನಿವಾಸ ಪೂಜಾರಿ, ವಿಧಾನಪರಿಷತ್ ಸದಸ್ಯ ಕಿಶೋರ್ ಕುಮಾರ್ ಹಾಗೂ ಮೈತ್ರಿ ಪಕ್ಷ ಜೆಡಿಎಸ್ನ ಬೋಜೆ ಗೌಡ ಅವರ ಹೆಸರು ಅಥವಾ ಭಾವಚಿತ್ರಗಳನ್ನು ಕಾರ್ಯಕ್ರಮಗಳಲ್ಲಿ ಬಳಸಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ.
“ಸ್ವತಃ ಸರ್ಕಾರಿ ಶಿಷ್ಟಾಚಾರ ಪಾಲಿಸದೇ, ಊರಿಗೆಲ್ಲಾ ಶಿಷ್ಟಾಚಾರದ ಉಪದೇಶ ನೀಡುವ ಮೊದಲು ತಮ್ಮ ನಡೆ-ನುಡಿಗಳನ್ನು ಪರಿಶೀಲಿಸಿಕೊಳ್ಳಬೇಕು,” ಎಂದು ಕೆಡಿಪಿ ಸಭೆಯಲ್ಲಿ ಅಧಿಕಾರಿಗಳ ವಿರುದ್ಧ ಶಾಸಕರು ಎತ್ತಿದ ಆಕ್ಷೇಪಕ್ಕೆ ಪ್ರತಿಕ್ರಿಯೆ ನೀಡಿರುವ ಶುಭದ ರಾವ್ ಹೇಳಿದ್ದಾರೆ.