ಮಂಗಳೂರು, ಮೇ. 18 (DaijiworldNews/TA): ಚಾಮರ ಫೌಂಡೇಶನ್ (ರಿ.) ಹಾಗೂ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ (ರಿ.) ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ಮಕ್ಕಳ “ರಂಗಶಿಬಿರ 2026” ಭಾನುವಾರ ಆದರ್ಶನಗರ, ಚಿಲಿಂಬಿಗುಡ್ಡೆಯಲ್ಲಿ ವಿಜೃಂಭಣೆಯಿಂದ ಉದ್ಘಾಟನೆಗೊಂಡಿತು. ಸ್ವರ್ಗೀಯ ಯತೀಶ್ ವೈ ಶೆಟ್ಟಿಯವರ ಸ್ಮರಣಾರ್ಥ ಈ ಏಳು ದಿನಗಳ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ.

ಪ್ರಸಿದ್ಧ ರಂಗ ನಿರ್ದೇಶಕ ಜಗನ್ ಪವಾರ್ ಶಿಬಿರವನ್ನು ಉದ್ಘಾಟಿಸಿ ಮಾತನಾಡಿ, ಮಕ್ಕಳ ವ್ಯಕ್ತಿತ್ವ ವಿಕಸನ, ಸಂವಹನ ಕೌಶಲ್ಯ ಹಾಗೂ ಸೃಜನಶೀಲತೆಯ ಬೆಳವಣಿಗೆಯಲ್ಲಿ ರಂಗಭೂಮಿಯ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು. ಬಳಿಕ ಅವರು ಮಕ್ಕಳಿಗೆ ಮೊದಲ ರಂಗ ತರಬೇತಿಯನ್ನು ನೀಡಿದರು.
ಕಾರ್ಯಕ್ರಮದಲ್ಲಿ ಆದರ್ಶ ಫ್ರೆಂಡ್ಸ್ ಅಸೋಸಿಯೇಶನ್ ಅಧ್ಯಕ್ಷ ಅಶೋಕ್ ಕೋಟ್ಯಾನ್, ಕದ್ರಿ ದೇವಸ್ಥಾನದ ಟ್ರಸ್ಟಿ ರಾಜೇಂದ್ರ ಚಿಲಿಂಬಿ ಹಾಗೂ ಚಾಮರ ಫೌಂಡೇಶನ್ ವ್ಯವಸ್ಥಾಪಕ ಟ್ರಸ್ಟಿ ರಚನಾ ಉಪಸ್ಥಿತರಿದ್ದರು. ಚಾಮರ ಫೌಂಡೇಶನ್ ಟ್ರಸ್ಟಿ ಮನೀಶ್ ಕೆ. ಸಾಲ್ಯಾನ್ ಶಿಬಿರದ ಉದ್ದೇಶ ವಿವರಿಸಿ, “ಸ್ವರ್ಗೀಯ ಯತೀಶ್ ವೈ ಶೆಟ್ಟಿಯವರ ನೆನಪಿನಲ್ಲಿ ಯುವಪೀಳಿಗೆಯಲ್ಲಿ ಕಲೆ ಮತ್ತು ಸಾಂಸ್ಕೃತಿಕ ಪ್ರಜ್ಞೆ ಬೆಳೆಸುವ ಉದ್ದೇಶದಿಂದ ಶಿಬಿರವನ್ನು ಆಯೋಜಿಸಲಾಗಿದೆ” ಎಂದು ತಿಳಿಸಿದರು.
ನೀನಾಸಂನಲ್ಲಿ ತರಬೇತಿ ಪಡೆದ ರಂಗಕಲಾವಿದೆ ಹಾಗೂ ಚಾಮರ ಫೌಂಡೇಶನ್ ಟ್ರಸ್ಟಿ ತ್ರಿಶಾ ಶೆಟ್ಟಿ ಶಿಬಿರದ ನಿರ್ದೇಶನ ವಹಿಸಿಕೊಂಡಿದ್ದು, ಟ್ರಸ್ಟಿ ಪ್ರಶಾಂತ್ ಕುಮಾರ್ ಶಿಬಿರದ ಸಮನ್ವಯ ಹೊಣೆ ಹೊತ್ತಿದ್ದಾರೆ. ಮೇ 17ರಿಂದ ಮೇ 23ರವರೆಗೆ ಪ್ರತಿದಿನ ಬೆಳಗ್ಗೆ 9ರಿಂದ ಮಧ್ಯಾಹ್ನ 1ರವರೆಗೆ ಶಿಬಿರ ನಡೆಯಲಿದ್ದು, 6ನೇ ತರಗತಿಯಿಂದ 12ನೇ ತರಗತಿಯವರೆಗಿನ ವಿದ್ಯಾರ್ಥಿಗಳಿಗೆ ಅವಕಾಶ ಕಲ್ಪಿಸಲಾಗಿದೆ. ಮೊದಲು ನೋಂದಾಯಿಸಿಕೊಳ್ಳುವ 15ರಿಂದ 20 ಮಕ್ಕಳಿಗೆ ಮಾತ್ರ ಪ್ರವೇಶ ನೀಡಲಾಗುತ್ತದೆ. ಶಿಬಿರಾರ್ಥಿಗಳಿಗೆ ಲಘು ಉಪಹಾರದ ವ್ಯವಸ್ಥೆಯೂ ಮಾಡಲಾಗಿದೆ. ಶಿಬಿರದ ಸಮಾರೋಪ ದಿನದಲ್ಲಿ ಮಕ್ಕಳಿಂದ ವಿಶೇಷ “ರಂಗಪ್ರಯೋಗ” ಪ್ರದರ್ಶನ ನಡೆಯಲಿದೆ. ಕು. ಕೌತಿಕಾ ಕಾರ್ಯಕ್ರಮ ನಿರೂಪಿಸಿದರು. ಪ್ರಶಾಂತ್ ಕುಮಾರ್ ವಂದನಾರ್ಪಣೆ ಸಲ್ಲಿಸಿದರು.