ಮಂಗಳೂರು, ಮೇ. 17 (DaijiworldNews/TA) : ಹೈಕೋರ್ಟ್ ನ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂಬ ಸುಮಾರು ಎರಡು ವರ್ಷಗಳ ನಿರತಂರ ಬೇಡಿಕೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರೇ ಪೀಠಕ್ಕೆ ಅಗತ್ಯವಾದ ಮೂಲಭೂತ ಸೌಕರ್ಯಗಳನ್ನು ಒದಗಿಸಲು ಸಿದ್ಧ ಇರುವುದಾಗಿ ಮುಖ್ಯ ನ್ಯಾಯಾಧೀಶರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಈ ಮೂಲಕ ಪೀಠ ಸ್ಥಾಪನೆಯ ಶೇ.80ರಷ್ಟು ಕಾರ್ಯ ಪೂರ್ಣಗೊಂಡಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿ’ಸೋಜ ಹೇಳಿದ್ದಾರೆ.

ಮಂಗಳೂರು ಮಹಾನಗರ ಪಾಲಿಕೆ ಕಚೇರಿಯಲ್ಲಿರುವ ತಮ್ಮ ಕೊಠಡಿಯಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಹೈಕೋರ್ಟ್ ನ ಮುಖ್ಯ ನ್ಯಾಯಾಧೀಶರಿಗೆ ಈ ಬಗ್ಗೆ ಸಲ್ಲಿಸಿರುವ ಪತ್ರದ ಪ್ರತಿಯೊಂದಿಗೆ ಮಾಹಿತಿ ನೀಡಿದರು. ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನಿಯೋಗ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ತಿಳಿಸಿರುವಂತೆ ಇಲ್ಲಿ ಲಭ್ಯ ಇರುವ ಮೂಲಭೂತ ಸೌಕರ್ಯಗಳನ್ನು ಪರಿಶೀಲಿಸಲಿದೆ.
ಸಂಚಾರಿ ಪೀಠ ಸ್ಥಾಪಿಸಲು ಅಗತ್ಯವಾದ ಎಲ್ಲ ಇತರ ಸೌಲಭ್ಯಗಳನ್ನು ಕೂಡಾ ಒದಗಿಸಲು ಸಿದ್ಧ ಇರುವುದಾಗಿ ಮುಖ್ಯಮಂತ್ರಿಯವರು ಪತ್ರದಲ್ಲಿ ತಿಳಿಸಿರುವ ಕಾರಣ ಅಕ್ಟೋಬರ್ ಒಳಗೆ ಸಂಚಾರಿ ಪೀಠ ಕಾರ್ಯಾರಂಭ ಆಗಬೇಕು ಎಂಬುದು ನಮ್ಮ ಆಶಯವಾಗಿದೆ ಎಂದು ಅವರು ಹೇಳಿದರು.