ಬಂಟ್ವಾಳ, ಮೇ. 17 (DaijiworldNews/TA): ತಾಲೂಕಿನ ಕೆಲ ಭಾಗಗಳಲ್ಲಿ ಕಳೆದ ಎರಡು ದಿನಗಳಿಂದ ಆಗಾಗ್ಗೆ ಮಳೆಯೊಂದಿಗೆ ಗುಡುಗು-ಸಿಡಿಲಿನ ಅಬ್ಬರ ಹೆಚ್ಚಾಗಿದೆ. ಭೀಕರ ಗುಡುಗು ಮಳೆಯ ಪರಿಣಾಮ ಮಹತೋಬಾರ ಶ್ರೀ ಕಾರಿಂಜೇಶ್ವರ ದೇವಸ್ಥಾನಕ್ಕೆ ಸಿಡಿಲು ಬಡಿದು ಹಾನಿಯಾಗಿರುವ ಘಟನೆ ನಡೆದಿದೆ.


ಸಿಡಿಲು ಬಡಿದ ಪರಿಣಾಮ ಬೆಟ್ಟದ ಮೇಲೆ ಇರುವ ಶಿವನ ದೇವಾಲಯದ ಗರ್ಭಗುಡಿಯ ಒಂದು ಭಾಗಕ್ಕೆ ಹಾನಿಯಾಗಿದೆ. ಘಟನೆ ನಡೆದ ಸಂದರ್ಭ ದೇವಸ್ಥಾನದಲ್ಲಿ ಭಕ್ತರ ಸಂಚಾರ ಕಡಿಮೆಯಿದ್ದ ಕಾರಣ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎನ್ನಲಾಗಿದೆ.
ಸ್ಥಳೀಯ ಭಕ್ತರು ಮತ್ತು ದೇವಸ್ಥಾನದ ಆಡಳಿತ ಮಂಡಳಿ ತಕ್ಷಣ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಕಳೆದ ಎರಡು ದಿನಗಳಿಂದ ತಾಲೂಕಿನಲ್ಲಿ ಮಳೆಯೊಂದಿಗೆ ಸಿಡಿಲಿನ ಅಬ್ಬರ ಹೆಚ್ಚಾಗಿರುವ ಹಿನ್ನೆಲೆ, ಎತ್ತರ ಪ್ರದೇಶಗಳು ಹಾಗೂ ಬೆಟ್ಟ ಪ್ರದೇಶಗಳಿಗೆ ತೆರಳುವವರು ಎಚ್ಚರಿಕೆ ವಹಿಸುವಂತೆ ಸ್ಥಳೀಯರು ಮನವಿ ಮಾಡಿದ್ದಾರೆ.