ಮೂಡುಬಿದಿರೆ, ಮೇ. 15 (DaijiworldNews/AA): ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳನ್ನು ಮಂಗಳೂರು ನಗರದ ಮೂಡುಬಿದಿರೆ ಪೊಲೀಸರು ಬಂಧಿಸಿದ್ದಾರೆ.

ಹಂಡೇಲಿನ ಮಹಮ್ಮದ್ ಆರಿಫ್ ಮತ್ತು ಆತನ ಸಹಚರ ಗಂಟಾಲಕಟ್ಟೆಯ ಇಮ್ರಾನ್ ಯಾನೆ ಇಬ್ರಾಹಿಂ ಬಂಧಿತ ಆರೋಪಿಗಳು.
ಗುರುವಾರ ಬೆಳಗ್ಗೆ 7:00 ಗಂಟೆಗೆ ಪಿಎಸ್ಐ ಕೃಷ್ಣಪ್ಪ ಮತ್ತು ಸಿಬ್ಬಂದಿಗಳು ರೌಂಡ್ಸ್ ಕರ್ತವ್ಯದಲ್ಲಿರುವಾಗ ಬೆಳುವಾಯಿ ಕಡೆಯಿಂದ ಮಾರ್ನಾಡು ಅಳಿಯೂರು ಕಡೆಗೆ ಮಾರುತಿ ಬ್ರೀಜಾ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡಿಕೊಂಡು ಹೋಗುತ್ತಿದ್ದಾರೆ ಎಂಬುದಾಗಿ ಖಚಿತ ಮಾಹಿತಿ ಲಭಿಸಿತ್ತು. ಹೀಗಾಗಿ ಪೊಲೀಸರು ಪಡುಮಾರ್ನಾಡು ಗ್ರಾಮದ ಗುಂಡುಕಲ್ಲು ಕ್ರಾಸ್ ಬಳಿ ವಾಹನ ತಪಾಸಣೆ ಮಾಡುತ್ತಿದ್ದರು.
ತಪಾಸಣೆ ವೇಳೆ ಸುಮಾರು 7:30 ಗಂಟೆಗೆ ಬೆಳುವಾಯಿ ಕಡೆಯಿಂದ ಬಂದ ಕಾರನ್ನು ನಿಲ್ಲಿಸಲು ಸೂಚನೇ ನೀಡಿದಾಗ ನಿಲ್ಲಿಸದೇ ಮುಂದಕ್ಕೆ ಚಲಾಯಿಸಿಕೊಂಡು ಹೋಗಿರುತ್ತಾರೆ. ನಂತರ ಈ ವಾಹನವನ್ನು ಬೆನ್ನಟ್ಟಿದಾಗ ಗುಂಡುಕಲ್ಲು 5 ಸೈಂಟ್ಸ್ ರಸ್ತೆಗೆ ತಿರುಗಿ ಸಾಹುಲ್ ಹಮೀದ್ ಎಂಬುವರ ಮನೆ ಕಂಪೌಂಡ್ ಒಳಭಾಗದಲ್ಲಿ ಕಾರನ್ನು ನಿಲ್ಲಿಸಿ ಪರಾರಿಯಾಗಲು ಯತ್ನಿಸಿದ್ದಾರೆ. ಕೂಡಲೇ ಕಾರ್ಯಪ್ರವೃತ್ತರಾದ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಆರೋಪಿಗಳನ್ನು ವಿಚಾರಿಸಿದ ಬಳಿಕ ಪೊಲೀಸರು ಕಾರನ್ನು ತಪಾಸಣೆ ನಡೆಸಿದ್ದಾರೆ. ಈ ವೇಳೆ ಕಾರನ್ನು ಪರಿಶೀಲಿಸಿದಾಗ ಕಾರಿನ ಹಿಂಬದಿ ಸೀಟ್ ನ್ನು ತೆಗೆದು ಅದರ ಮೇಲೆ ನೀಲಿ ಬಣ್ಣದ ಪ್ಲಾಸ್ಟಿಕ್ ನ್ನು ಹಾಕಿ ಅದರ ಮೇಲೆ 1 ಗಂಡು ಕರುವನ್ನು ಹಿಂಸಾತ್ಮಕವಾಗಿ ಕಾಲು ಮತ್ತು ತಲೆಯನ್ನು ಹಗ್ಗದಿಂದ ಕಟ್ಟಿ ಸಾಗಿಸುತ್ತಿರುವುದು ಕಂಡುಬಂದಿದೆ.
ಆರೋಪಿಗಳು ಕಳೆದ ಒಂದು ವಾರದಿಂದ ವಿವಿಧೆಡೆ ದನಗಳನ್ನು ಕಳ್ಳತನ ಮಾಡುತ್ತಿದ್ದಾರೆ. ಸಾಹುಲ್ ಹಮೀದ್ ರವರ ಮನೆಯ ಬಳಿ ಕಡಿದು ಮಾಂಸ ಮಾಡಿ ಮಾರಾಟ ಮಾಡುವ ಸಲುವಾಗಿ ಸಂಗ್ರಹಣೆ ಮಾಡಿರುವುದಾಗಿ ಆರೋಪಿಗಳು ತಿಳಿಸಿರುತ್ತಾರೆ. ಆರೋಪಿಗಳು ಸಾಗಾಟ ಮಾಡುತ್ತಿದ್ದ ದನವನ್ನು, ಸಾಗಾಟ ಮಾಡಲು ಬಳಸಿದ ಕಾರನ್ನು ಮತ್ತು ಆರೋಪಿಗಳನ್ನು ವಶಕ್ಕೆ ಪಡೆದು ಕ್ರಮ ಕೈಗೊಂಡಿರುವುದಾಗಿದೆ.
ಬಂಧಿತ ಆರೋಪಿ ಮೊಹಮ್ಮದ್ ಆರಿಫ್ ಎಂಬಾತನ ವಿರುದ್ಧ ಈಗಾಗಲೇ ಬಜಪೆ, ಬಣಕಲ್, ಮೂಡುಬಿದಿರೆ ಹಾಗೂ ಆರೋಪಿ ಇಮ್ರಾನ್ ವಿರುದ್ಧ ಮೂಡುಬಿದಿರೆ ಹಾಗೂ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತಾದೆ.