ಉಡುಪಿ, ಮೇ. 15 (DaijiworldNews/AA): ಜಿಲ್ಲೆಯಲ್ಲಿ ಅಕ್ರಮ ಕ್ರಿಕೆಟ್ ಬೆಟ್ಟಿಂಗ್ ಚಟುವಟಿಕೆಗಳ ತೊಡಗಿದ್ದ ಆರೋಪಿಯೋರ್ವನನ್ನು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕರು ಹಾಗೂ ವಿಶೇಷ ಕಾರ್ಯಾಂಗ ದಂಡಾಧಿಕಾರಿಗಳು ಉಡುಪಿ ಜಿಲ್ಲೆಯಿಂದ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದಾರೆ.

ಬ್ರಹ್ಮಾವರ ತಾಲೂಕಿನ ವಾರಂಬಳ್ಳಿ ನಿವಾಸಿ ಭರತ್ ಜಯರಾಮ್ ದಾಸ್ (34) ಎಂಬಾತನನ್ನು ಜಿಲ್ಲೆಯಿಂದ ಗಡಿಪಾರು ಮಾಡಲಾಗಿದೆ.
ಆರೋಪಿಯ ವಿರುದ್ಧ ಕೋಟ ಮತ್ತು ಕುಂದಾಪುರ ಪೊಲೀಸ್ ಠಾಣೆಗಳಲ್ಲಿ ಒಟ್ಟು ಮೂರು ಕ್ರಿಕೆಟ್ ಬೆಟ್ಟಿಂಗ್ ಪ್ರಕರಣಗಳು ದಾಖಲಾಗಿವೆ. ಈ ಪೈಕಿ ಒಂದು ಪ್ರಕರಣದಲ್ಲಿ ಈಗಾಗಲೇ ಆತನಿಗೆ ಶಿಕ್ಷೆಯಾಗಿದ್ದು, ಉಳಿದ ಎರಡು ಪ್ರಕರಣಗಳ ತನಿಖೆ ಪ್ರಗತಿಯಲ್ಲಿದೆ.
ಭರತ್ ಜಯರಾಮ್ ದಾಸ್ನನ್ನು ಉಡುಪಿ ಜಿಲ್ಲೆಯಿಂದ ಗಡಿಪಾರು ಮಾಡಿ ಗುರುವಾರ ಆದೇಶ ಹೊರಡಿಸಲಾಗಿದೆ. ಆರೋಪಿಯನ್ನು ಬೆಂಗಳೂರು ಪೊಲೀಸ್ ಕಮಿಷನರೇಟ್ ವ್ಯಾಪ್ತಿಯ ಕೆಂಗೇರಿ ಪೊಲೀಸ್ ಠಾಣೆಯ ವ್ಯಾಪ್ತಿಗೆ ಗಡಿಪಾರು ಮಾಡಲಾಗಿದೆ.