ಉಡುಪಿ, ಮೇ. 15 (DaijiworldNews/AA): ಕಳೆದ ಒಂದೂವರೆ ವರ್ಷಗಳಿಂದ ನಡೆಯುತ್ತಿರುವ ಅಂಬಲಪಾಡಿ ಫ್ಲೈಓವರ್ ನಿರ್ಮಾಣ ಕಾರ್ಯವು ಇದೀಗ ಅಂತಿಮ ಹಂತಕ್ಕೆ ತಲುಪಿದೆ. ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದ ಕೋಟ ಶ್ರೀನಿವಾಸ ಪೂಜಾರಿ ಅವರು ಅಧಿಕಾರಿಗಳೊಂದಿಗೆ ಸ್ಥಳಕ್ಕೆ ಭೇಟಿ ನೀಡಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸಿದರು.





ಯೋಜನೆಯ ಕುರಿತು ಮಾತನಾಡಿದ ಅವರು, ಅಂಬಲಪಾಡಿಯಲ್ಲಿ ವಾಹನಗಳ ಅತಿಯಾದ ಓಡಾಟದಿಂದ ಉಂಟಾಗುತ್ತಿದ್ದ ಟ್ರಾಫಿಕ್ ಜಾಮ್ ಮತ್ತು ಪದೇ ಪದೇ ಸಂಭವಿಸುವ ಅಪಘಾತಗಳನ್ನು ತಡೆಗಟ್ಟಲು ಈ ಫ್ಲೈಓವರ್ ನಿರ್ಮಿಸಲಾಗುತ್ತಿದೆ. ಫ್ಲೈಓವರ್ನ ಮೊದಲ ಹಂತದ ಕಾಮಗಾರಿಯನ್ನು ಮೇ ಅಂತ್ಯದೊಳಗೆ ಪೂರ್ಣಗೊಳಿಸಲು ಪ್ರಯತ್ನಿಸಲಾಗುತ್ತಿದೆ. ಆದರೆ, ಕೆಲವು ತಾಂತ್ರಿಕ ಕಾರಣಗಳಿಂದಾಗಿ ಜೂನ್ ಮೊದಲ ವಾರದಲ್ಲಿ ಫ್ಲೈಓವರ್ನ ಒಂದು ಭಾಗವನ್ನು ವಾಹನ ಸಂಚಾರಕ್ಕೆ ಮುಕ್ತಗೊಳಿಸಲಾಗುವುದು ಎಂದು ಮಾಹಿತಿ ನೀಡಿದರು.
ಸಾರ್ವಜನಿಕರು ಮತ್ತು ಪ್ರಯಾಣಿಕರ ನಿರಂತರ ಒತ್ತಾಯದ ಹಿನ್ನೆಲೆಯಲ್ಲಿ ಕಾಮಗಾರಿಯನ್ನು ಚುರುಕುಗೊಳಿಸಲಾಗಿದ್ದು, ನಿಗದಿತ ಸಮಯದೊಳಗೆ ಪೂರ್ಣಗೊಳಿಸಲು ಕ್ರಮ ಕೈಗೊಳ್ಳಲಾಗುತ್ತಿದೆ. ಫ್ಲೈಓವರ್ ಸಂಚಾರಕ್ಕೆ ಮುಕ್ತವಾದ ನಂತರ, ಈ ಭಾಗದ ಸಂಚಾರ ದಟ್ಟಣೆ ಸಮಸ್ಯೆ ಬಹುತೇಕ ಹತೋಟಿಗೆ ಬರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ರಾಷ್ಟ್ರೀಯ ಹೆದ್ದಾರಿ ವಿಭಾಗದ ಇಂಜಿನಿಯರ್ ನವೀನ್ ಮತ್ತು ಇತರ ಇಲಾಖಾ ಅಧಿಕಾರಿಗಳು ಉಪಸ್ಥಿತರಿದ್ದರು.