ಕುಂದಾಪುರ, ಮೇ. 15 (DaijiworldNews/TA): ಕಾಂಗ್ರೆಸ್ ಮುಕ್ತ ಭಾರತ ಕನಸು ಈಡೇರದಿರುವ ಸಂಕಟ ಬಿಜೆಪಿ ಅನುಭವಿಸುತ್ತಿದೆ. ಒಳ್ಳೆಯ ದಿನ ಕೊಡುವ ಭರವಸೆಯೊಂದಿಗೆ ಅಧಿಕಾರಕ್ಕೆ ಬಂದ ಬಿಜೆಪಿ ದೇಶದ ಜನತೆಗೆ ಕೆಟ್ಟ ದಿನಗಳನ್ನು ನೀಡಿದೆ. ಪ್ರಸ್ತುತ ಕಾಂಗ್ರೆಸ್ ಪಕ್ಷಕ್ಕೆ ಉಜ್ವಲ ಅವಕಾಶ ತೆರೆದು ಕೊಂಡಿದೆ. ಮುಂದಿನ 2-3 ತಿಂಗಳೊಳಗೆ ಸ್ಥಳೀಯಾಡಳಿತ ಚುನಾವಣೆ ನಡೆಸಲು ಸರಕಾರ ನಿರ್ಧರಿಸಿದೆ. ಕಾರ್ಯಕರ್ತರು ಇದಕ್ಕೆ ಅಣಿಯಾಗಬೇಕು ಎಂದು ಮಾಹಿತಿ, ತಂತ್ರಜ್ಞಾನ ಮತ್ತು ಸಣ್ಣ ನೀರಾವರಿ ಇಲಾಖೆ ಸಚಿವ ಎಸ್.ಎನ್. ಭೋಸರಾಜು ಹೇಳಿದರು.

ಬೋರ್ಡ್ ಹೈಸ್ಕೂಲ್ ಸಮೀಪದ ಕುಂದಾ ಪುರ ಬ್ಲಾಕ್ ಕಾಂಗ್ರೆಸ್ ಕಚೇರಿಯ ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಶಂಕುಸ್ಥಾಪನೆ ನೆರವೇರಿಸಿ ಮಾತನಾಡಿದರು. ಗ್ಯಾರಂಟಿ ಯೋಜನೆಯಡಿ ವಾರ್ಷಿಕ 60000 ಕೋಟಿಯಂತೆ ಈವರೆಗೆ 1 ಲಕ್ಷ 23 ಸಾವಿರ ಕೋಟಿ ರೂ. ಅನುದಾನ ರಾಜ್ಯದ ಜನರಿಗೆ ನೀಡಿದ್ದೇವೆ. ಶತಮಾನ ಕಂಡ ಕಾಂಗ್ರೆಸ್ ಪಕ್ಷ ಅದರ ಸವಿನೆನಪಿಗಾಗಿ 100 ಕಾಂಗ್ರೆಸ್ ಭವನ ನಿರ್ಮಾಣಕ್ಕೆ ಮುಂದಾಗಿದೆ. ಪ್ರತಿ ಕ್ಷೇತ್ರದಲ್ಲೂ ಭವನ ತಲೆಯೆತ್ತಲಿದೆ ಎಂದರು.
ಮಾಜಿ ಸಚಿವ ಕೆ.ಜಯಪ್ರಕಾಶ್ ಹೆಗ್ಡೆ , ವಿಧಾನ ಪರಿಷತ್ ಸದಸ್ಯ ಮಂಜುನಾಥ ಭಂಡಾರಿ , ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹರಿಪ್ರಸಾದ್ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಮುಖಂಡ ರಾದ ಎಂ.ಎ.ಗಫೂರ್, ಮುನಿಯಾಲು ಉದಯಕುಮಾರ ಶೆಟ್ಟಿ, ದಿನೇಶ್ ಹೆಗ್ಡೆ ಮೊಳಹಳ್ಳಿ, ಮಲ್ಯಾಡಿ ಶಿವರಾಮ ಶೆಟ್ಟಿ, ದೇವಕಿ ಪಿ. ಸಣ್ಣಯ್ಯ, ಬಿ.ಹರಿಯಣ್ಣ, ಕಿಶನ್ ಹೆಗ್ಡೆ ಕೊಳ್ಳಬೈಲು ಸೇರಿದಂತೆ ಹಲವರು ಉಪಸ್ಥಿತರಿದ್ದರು.