ಉಡುಪಿ, ಮೇ. 13 (DaijiworldNews/AA): ರಾಷ್ಟ್ರೀಯ ಪಂಚಾಯತ್ ಪ್ರಶಸ್ತಿ- 2025 ಪ್ರಕಟಗೊಂಡಿದ್ದು, ಕರ್ನಾಟಕ ರಾಜ್ಯವು ಅತ್ಯುತ್ತಮ ಸಾಧನೆ ಮಾಡಿದೆ. ರಾಜ್ಯದ ಆರು ಗ್ರಾಮ ಪಂಚಾಯತ್ಗಳು ವಿವಿಧ ವಿಭಾಗಗಳಲ್ಲಿ ಪ್ರತಿಷ್ಠಿತ ರಾಷ್ಟ್ರೀಯ ಮಾನ್ಯತೆಯನ್ನು ಪಡೆದಿವೆ. ವಿಶೇಷವೆಂದರೆ, ಪ್ರಶಸ್ತಿ ಪಡೆದ ಆರು ಪಂಚಾಯತ್ಗಳಲ್ಲಿ ಐದು ಉಡುಪಿ ಜಿಲ್ಲೆಗೆ ಸೇರಿವೆ.

ದೇಶಾದ್ಯಂತ ಆಯ್ಕೆಯಾದ ಒಟ್ಟು 42 ಗ್ರಾಮ ಪಂಚಾಯತ್ಗಳಲ್ಲಿ ಕರ್ನಾಟಕವೇ ಅತಿ ಹೆಚ್ಚು ಪ್ರಶಸ್ತಿಗಳನ್ನು ಬಾಚಿಕೊಂಡಿರುವುದು ಹೆಮ್ಮೆಯ ವಿಷಯ ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶಸ್ತಿ ವಿಜೇತ ಪಂಚಾಯತ್ಗಳನ್ನು ಅಭಿನಂದಿಸಿದ್ದಾರೆ.
ಪ್ರಶಸ್ತಿ ವಿಜೇತ ಗ್ರಾಮ ಪಂಚಾಯತ್ಗಳ ವಿವರ:
*ಉಡುಪಿ ಹೆಬ್ರಿಯ ಮುದ್ರಾಡಿ ಗ್ರಾಮ ಪಂಚಾಯತ್, 'ಬಡತನ ಮುಕ್ತ ಮತ್ತು ಸುಧಾರಿತ ಜೀವನೋಪಾಯ ಪಂಚಾಯತ್' ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದ್ದು, 1 ಕೋಟಿ ರೂ. ನಗದು ಬಹುಮಾನ ಪಡೆದಿದೆ.
*ಉಡುಪಿ ಕುಂದಾಪುರದ ವಂಡ್ಸೆ ಗ್ರಾಮ ಪಂಚಾಯತ್, 'ಆರೋಗ್ಯವಂತ ಪಂಚಾಯತ್' ವಿಭಾಗದಲ್ಲಿ ದ್ವಿತೀಯ ಸ್ಥಾನ ಪಡೆದಿದ್ದು, 75 ಲಕ್ಷ ರೂ. ನಗದು ಬಹುಮಾನಕ್ಕೆ ಪಾತ್ರವಾಗಿದೆ.
*ಉಡುಪಿ ಹೆಬ್ರಿಯ ಮಡಾಮಕ್ಕಿ ಗ್ರಾಮ ಪಂಚಾಯತ್, 'ಜಲ ಸಮೃದ್ಧ ಪಂಚಾಯತ್' ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, 75 ಲಕ್ಷ ರೂ. ನಗದು ಬಹುಮಾನ ಪಡೆದಿದೆ.
*ಬೆಂಗಳೂರು ನಗರ ಜಿಲ್ಲೆಯ ಹಾಲನಾಯಕನಹಳ್ಳಿ ಗ್ರಾಮ ಪಂಚಾಯತ್, 'ಮಕ್ಕಳ ಸ್ನೇಹಿ ಪಂಚಾಯತ್' ವಿಭಾಗದಲ್ಲಿ ದ್ವಿತೀಯ ಸ್ಥಾನ ಗಳಿಸಿದ್ದು, 75 ಲಕ್ಷ ರೂ. ನಗದು ಬಹುಮಾನ ಪಡೆದಿದೆ.
*ಉಡುಪಿ ಕಾರ್ಕಳದ ಸಾನೂರು ಗ್ರಾಮ ಪಂಚಾಯತ್, 'ಸ್ವಾವಲಂಬಿ ಮೂಲಸೌಕರ್ಯ ಪಂಚಾಯತ್' ವಿಭಾಗದಲ್ಲಿ ತೃತೀಯ ಸ್ಥಾನ ಗಳಿಸಿದ್ದು, 25 ಲಕ್ಷ ರೂ. ನಗದು ಬಹುಮಾನ ಪಡೆದಿದೆ.
*ಉಡುಪಿ ಕುಂದಾಪುರದ ಹಕ್ಲಾಡಿ ಗ್ರಾಮ ಪಂಚಾಯತ್, 'ಸಾಮಾಜಿಕ ನ್ಯಾಯ ಮತ್ತು ಸುಭದ್ರ ಪಂಚಾಯತ್' ವಿಭಾಗದಲ್ಲಿ ತೃತೀಯ ಸ್ಥಾನ ಪಡೆದಿದ್ದು, 25 ಲಕ್ಷ ರೂ. ನಗದು ಬಹುಮಾನಕ್ಕೆ ಭಾಜನವಾಗಿದೆ.
ರಾಜ್ಯಕ್ಕೆ ದೊರೆತ ಒಟ್ಟು ಆರು ಪ್ರಶಸ್ತಿಗಳಲ್ಲಿ ಐದನ್ನು ಉಡುಪಿ ಜಿಲ್ಲೆಯೊಂದೇ ಬಾಚಿಕೊಳ್ಳುವ ಮೂಲಕ ಸ್ಥಳೀಯ ಆಡಳಿತಕ್ಕೆ ಜಿಲ್ಲೆಯನ್ನು ಮಾದರಿಯನ್ನಾಗಿ ರೂಪಿಸಿದೆ. ತಮ್ಮ ಸಮರ್ಪಿತ ಸೇವೆ ಮತ್ತು ಅಭಿವೃದ್ಧಿ ಕಾರ್ಯಗಳ ಮೂಲಕ ರಾಜ್ಯಕ್ಕೆ ಕೀರ್ತಿ ತಂದ ಆರೂ ಪಂಚಾಯತ್ಗಳ ಜನಪ್ರತಿನಿಧಿಗಳು, ಅಧಿಕಾರಿಗಳು ಮತ್ತು ಸಿಬ್ಬಂದಿಗಳನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಶ್ಲಾಘಿಸಿದ್ದಾರೆ.