ಬಂಟ್ವಾಳ, ,ಮೇ. 11 (DaijiworldNews/AK): ದ.ಕ.ಜಿಲ್ಲೆಯ ಜೀವನಾಡಿಯಾಗಿರುವ ನೇತ್ರಾವತಿ ನದಿಯಲ್ಲಿ ನೀರಿನ ಮಟ್ಟ ಗಣನೀಯವಾಗಿ ಇಳಿಕೆಯಾಗಿರುವುದು ಆತಂಕಕ್ಕೆ ಕಾರಣವಾಗಿದ್ದು, ಬಿಸಿಲಿನ ತಾಪ ಇನ್ನಷ್ಟು ಹೆಚ್ಚಳವಾದರೆ ನೀರಿನ ಮಟ್ಟ ಮತ್ತಷ್ಟು ಕಡಿಮೆಯಾಗುವ ಸಾಧ್ಯತೆಗಳಿವೆ.


ಬಂಟ್ವಾಳ ಜಕ್ರಿಬೆಟ್ಟು ಡ್ಯಾಂ ನ ಕೆಳಭಾಗದಿಂದ ಪಾಣೆಮಂಗಳೂರು ನೂತನ ಸೇತುವೆವರೆಗೆ ನದಿಯಲ್ಲಿ ನೀರಿಲ್ಲದೆ ಬತ್ತಿಹೋಗಿದ್ದು, ಮರಳು ಮತ್ತು ಕಲ್ಲುಗಳು ಎದ್ದು ಕಾಣುತ್ತಿವೆ.
ತಾಲೂಕಿನಲ್ಲಿ ಕುಡಿಯುವ ನೀರಿಗೆ ಯಾವುದೇ ಅಭಾವ ತಲೆತೊರದಿದ್ದರೂ, ಕುಡಿಯುವ ನೀರು ಪೂರೈಕೆ ಮತ್ತು ಬಳಕೆಯ ಬಗ್ಗೆ ಅಧಿಕಾರಿಗಳು ಜಾಗೃತೆವಹಿಸುವಂತೆ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಮಂಗಳೂರು ನಗರಕ್ಕೆ ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ಮುಂಜಾಗ್ರತಾ ಕ್ರಮವನ್ನು ಜಿಲ್ಲಾಧಿಕಾರಿ ಅವರು ವಹಿಸಿ, ಅದೇಶವೊಂದನ್ನು ಹೊರಡಿಸಿದ್ದಾರೆ.
ಕುಡಿಯುವ ನೀರಿನ ಕೊರತೆಯಾಗದಂತೆ ನೋಡಿಕೊಳ್ಳಲು , ಇತರೆ ಉದ್ದೇಶಗಳಿಗಾಗಿ ಬಳಸದಂತೆಯೂ ಸೂಚನೆ ನೀಡಿದ್ದಾರೆ. ಅಲ್ಲದೆ ಎ.ಎಂ.ಆರ್.ಡ್ಯಾಮ್ ನಿಂದ ತುಂಬೆ ಡ್ಯಾಂ ಗೆ ನೀರು ಬಿಡುಗಡೆಗೊಳಿಸುವಂತೆ ಸೂಚಿಸಿದ್ದಾರೆ.
ಮಂಗಳೂರು ನಗರದ ಕುಡಿಯುವ ನೀರಿನ ನಿರ್ವಹಣೆ: ಜಿಲ್ಲಾಧಿಕಾರಿಗಳ ಕಚೇರಿಯಿಂದ ಮಹತ್ವದ ಆದೇಶ ಹೊರಡಿಸಿದ್ದಾರೆ.
ಬೇಸಿಗೆಯ ಈ ಸಂದರ್ಭದಲ್ಲಿ ಮಂಗಳೂರು ನಗರದ ಜನತೆಗೆ ಕುಡಿಯುವ ನೀರಿನ ತೊಂದರೆಯಾಗದಂತೆ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗಳ ಕಚೇರಿಯು ಮಹತ್ವದ ನಿರ್ದೇಶನಗಳನ್ನು ನೀಡಿದೆ.
ಪ್ರಮುಖ ಮುಖ್ಯಾಂಶಗಳು:
• ತುಂಬೆ ಅಣೆಕಟ್ಟು ಸ್ಥಿತಿಗತಿ: ಮಂಗಳೂರು ನಗರಕ್ಕೆ ನೇತ್ರಾವತಿ ನದಿಯ ತುಂಬೆ ಕಿಂಡಿ ಅಣೆಕಟ್ಟಿನಿಂದ ನೀರು ಪೂರೈಕೆಯಾಗುತ್ತಿದ್ದು, ಇದರ ಗರಿಷ್ಠ ಸಂಗ್ರಹಣಾ ಸಾಮರ್ಥ್ಯ 10.41 ಎಮ್.ಸಿ.ಎಂ ಆಗಿದೆ.
• ನೀರಿನ ಮಟ್ಟದ ವಿವರ: ದಿನಾಂಕ 21-04-2026 ರಲ್ಲಿದ್ದಂತೆ ತುಂಬೆ ಡ್ಯಾಂನಲ್ಲಿ 4.71 ಮೀ. ಮತ್ತು ಎ.ಎಂ.ಆರ್ (AMR) ಡ್ಯಾಂನಲ್ಲಿ 18.62 ಮೀ. ನೀರಿನ ಮಟ್ಟ ದಾಖಲಾಗಿತ್ತು. ಇದು ನಗರದ ಸುಮಾರು 22 ದಿನಗಳ ಅವಧಿಗೆ ಸಾಕಾಗುವಷ್ಟು ಲಭ್ಯತೆಯಾಗಿದೆ.
• ಜಿಲ್ಲಾಧಿಕಾರಿಗಳ ಆದೇಶ: ಬೇಸಿಗೆಯಲ್ಲಿ ನೀರಿನ ಅಭಾವ ತಲೆದೂರದಂತೆ ಎ.ಎಂ.ಆರ್ ಡ್ಯಾಂನಿಂದ ತುಂಬೆ ಡ್ಯಾಂಗೆ 6 ಮೀಟರ್ವರೆಗೆ ನೀರನ್ನು ಬಿಡುಗಡೆಗೊಳಿಸಲು ಸೂಚಿಸಲಾಗಿದೆ.
• ಆದ್ಯತೆಯ ಶೇಖರಣೆ: ಎ.ಎಂ.ಆರ್ ಅಣೆಕಟ್ಟಿನಲ್ಲಿ ಉಳಿದಿರುವ ನೀರನ್ನು ಬೇರೆ ಉದ್ದೇಶಗಳಿಗೆ ಬಳಸುವ ಬದಲು, ಕೇವಲ ಕುಡಿಯುವ ನೀರಿನ ಉದ್ದೇಶಕ್ಕಾಗಿ ಆದ್ಯತೆ ಮೇರೆಗೆ ಶೇಖರಣೆ ಮಾಡಿಡಲು ಪ್ಲಾಂಟ್ ಮ್ಯಾನೇಜರ್ಗೆ ನಿರ್ದೇಶನ ನೀಡಲಾಗಿದೆ.
• ತುರ್ತು ಕ್ರಮ: ಈ ಬಗ್ಗೆ ಕೂಡಲೇ ಕ್ರಮ ಕೈಗೊಂಡು ವರದಿ ಸಲ್ಲಿಸುವಂತೆ ಸಣ್ಣ ನೀರಾವರಿ ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರರಿಗೆ ಮತ್ತು ಎ.ಎಂ.ಆರ್ ಪವರ್ ಪ್ರೈವೇಟ್ ಲಿಮಿಟೆಡ್ಗೆ ತಿಳಿಸಲಾಗಿದೆ.
ಮಂಗಳೂರು ಮಹಾನಗರ ಪಾಲಿಕೆಯ ಪ್ರಸ್ತಾವನೆಯ ಮೇರೆಗೆ ಸಾರ್ವಜನಿಕ ಹಿತದೃಷ್ಟಿಯಿಂದ ಈ ಕ್ರಮವನ್ನು ಕೈಗೊಳ್ಳಲಾಗಿದೆ. ಸಾರ್ವಜನಿಕರು ನೀರನ್ನು ಮಿತವಾಗಿ ಬಳಸಿ ಸಹಕರಿಸಲು ವಿನಂತಿ ಮಾಡಿದ್ದಾರೆ.