ಬೆಳ್ತಂಗಡಿ, ಮೇ. 11 (DaijiworldNews/AA): ಇಲ್ಲಿನ ಕಸಬಾ ಗ್ರಾಮದ ಕೆಇಬಿ ರಸ್ತೆಯಲ್ಲಿರುವ 'ಪವನ್ ಕ್ಯಾಂಟೀನ್'ನ ಒಳಗಿನ ಕೋಣೆಯೊಂದರಲ್ಲಿ ಅಕ್ರಮವಾಗಿ ನಡೆಯುತ್ತಿದ್ದ ವೇಶ್ಯಾವಾಟಿಕೆ ದಂಧೆ ಮೇಲೆ ದಾಳಿ ನಡೆಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.


ಕ್ಯಾಂಟಿನ್ ಮಾಲೀಕ ಸುಂದರ್ ಶೆಟ್ಟಿ(55), ಬೆಳ್ತಂಗಡಿ ತಾಲೂಕಿನ ನಾವೂರು ನಿವಾಸಿ ಉಸ್ಮಾನ್(38) ಬಂಧಿತ ಆರೋಪಿಗಳು.
ಕ್ಯಾಂಟೀನ್ ನಡೆಸುತ್ತಿದ್ದ ಸುಂದರ್ ಶೆಟ್ಟಿ, ತನ್ನ ಪರಿಚಯಸ್ಥ ಉಸ್ಮಾನ್ ಎಂಬಾತನೊಂದಿಗೆ ಸೇರಿ ಅಕ್ರಮ ಲಾಭ ಗಳಿಸುವ ಉದ್ದೇಶದಿಂದ ಯುವತಿಯರನ್ನು/ಮಹಿಳೆಯರನ್ನು ಕ್ಯಾಂಟೀನ್ನ ಒಳಗಿನ ಕೋಣೆಗೆ ಕರೆತಂದು ವೇಶ್ಯಾವಾಟಿಕೆ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಬೆಳ್ತಂಗಡಿ ಪೊಲೀಸ್ ಠಾಣೆಯ ಪೊಲೀಸ್ ಉಪನಿರೀಕ್ಷಕ (ತನಿಖಾ ವಿಭಾಗ) ಸಿಕಂದರ್ ಪಾಷಾ ಅವರಿಗೆ ಈ ಅಕ್ರಮ ಚಟುವಟಿಕೆಯ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ರಹಸ್ಯವಾಗಿ ಈ ಬಗ್ಗೆ ಪರಿಶೀಲನೆ ನಡೆಸಿದಾಗ, ಕ್ಯಾಂಟೀನ್ ನಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವುದು ದೃಢಪಟ್ಟಿದೆ. ಇದರ ಬೆನ್ನಲ್ಲೇ, ಮೇ 10ರ ಭಾನುವಾರ ಸಂಜೆ ಬೆಳ್ತಂಗಡಿ ವೃತ್ತ ನಿರೀಕ್ಷಕ ರವಿ ಬಿ.ಎಸ್. ನೇತೃತ್ವದಲ್ಲಿ ಪೊಲೀಸ್ ಸಿಬ್ಬಂದಿ ಕ್ಯಾಂಟೀನ್ ಮೇಲೆ ದಾಳಿ ನಡೆಸಿದ್ದಾರೆ.
ಕೆ.ಇ.ಬಿ. ರಸ್ತೆಯಲ್ಲಿರುವ 'ಪವನ್ ಕ್ಯಾಂಟೀನ್' ಮೇಲೆ ಪೊಲೀಸರು ಹಠಾತ್ ದಾಳಿ ನಡೆಸಿದ್ದಾರೆ. ಸರ್ಕಾರಿ ಜಾಗದಲ್ಲಿ ಈ ಕ್ಯಾಂಟಿನ್ ಅನ್ನು ಕಳೆದ 20 ವರ್ಷಗಳಿಂದ ಕ್ಯಾಂಟೀನ್ ಮಾಲೀಕ ಸುಂದರ್ ಶೆಟ್ಟಿ ನಡೆಸುತ್ತಿದ್ದರು.
ಈ ಘಟನೆಗೆ ಸಂಬಂಧಿಸಿದಂತೆ ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 48/2026 ರಡಿ, ಐಟಿಪಿ ಆಕ್ಟ್ ನ ಕಲಂ 3, 4, 5 ಮತ್ತು ಭಾರತೀಯ ನ್ಯಾಯ ಸಂಹಿತೆಯ (ಬಿ.ಎನ್.ಎಸ್) ಕಲಂ 143(2) ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಸದ್ಯ ಪೊಲೀಸರು ಮುಂದಿನ ತನಿಖೆಯನ್ನು ಮುಂದುವರಿಸಿದ್ದಾರೆ.