ಬಂಟ್ವಾಳ, ಮೇ. 10 (DaijiworldNews/TA): ನೀರಪಾದೆಯ ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ( ರಿ.) ವತಿಯಿಂದ ಬಾಳ್ತಿಲ ಗ್ರಾಮದ ನೀರಪಾದೆ ಎಂಬಲ್ಲಿ ವಾಸ್ತು ತಜ್ಞ ಶ್ರೀನಾಥ್ ಪಿ. ಎಲ್ ದೇವದತ್ತ ಸುಳ್ಯ ಅವರ ಮಾರ್ಗದರ್ಶನದಲ್ಲಿ ಪುನರ್ ನಿರ್ಮಾಣಗೊಂಡ ನೂತನ ಬ್ರಹ್ಮ ಶ್ರೀ ನಾರಾಯಣ ಗುರುಮಂದಿರ ಲೋಕಾರ್ಪಣೆ ಮತ್ತು ಜಗದ್ಗುರು ಬ್ರಹ್ಮ ಶ್ರೀ ನಾರಾಯಣ ಗುರುವರ್ಯರ ಮೂರ್ತಿ ಪ್ರತಿಷ್ಠಾ ಸಾನಿಧ್ಯ ಕಲಶಾಭಿಷೇಕ ಕಾರ್ಯಕ್ರಮದ ಅಂಗವಾಗಿ ನಡೆದ ಧರ್ಮ ಸಭೆಯನ್ನು ವಿಶ್ವ ಹಿಂದೂ ಪರಿಷತ್ ಪ್ರಾಂತ ಗೋರಕ್ಷಾ ಪ್ರಮುಖ್ ಸುನಿಲ್ ಕೆ.ಆರ್. ದೀಪ ಪ್ರಜ್ವಲಿಸುವ ಮೂಲಕ ಚಾಲನೆ ನೀಡಿದರು.






ಬಳಿಕ ಮಾತನಾಡಿದ ಅವರು, ನಾರಾಯಣ ಗುರು ಮಂದಿರಗಳು ಸಂಸ್ಕಾರವನ್ನು ಕಲಿಸುವ ಕೇಂದ್ರಗಳಾದರೆ ನಾರಾಯಣ ಗುರುಗಳ ಯೋಚನೆ, ಚಿಂತನೆಗಳಿಗೆ ಹೋರಾಟಗಳಿಗೆ, ತತ್ವ ಸಿದ್ದಾಂತಗಳಿಗೆ ಗೌರವ ನೀಡಿದಂತಾಗುತ್ತದೆ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ಥಳದಾನಿಗಳು, ನಿವೃತ್ತ ಯೋಧರಾದ ಡೀಕಯ್ಯ ಪೂಜಾರಿ ಮಾತನಾಡಿ ಬಾಳ್ತಿಲ ಗ್ರಾಮದಲ್ಲಿ ಧಾರ್ಮಿಕ ಕಾರ್ಯಗಳನ್ನು ನಡೆಸಲು ಸರಿಯಾದ ಜಾಗವಿರಲಿಲ್ಲ, ಇನ್ನು ಮುಂದೆ ಪ್ರತಿಯೊಂದು ಒಳ್ಳೆಯ ಕೆಲಸಗಳಿಗೆ ಮಂದಿರ ಕೇಂದ್ರವಾಗಿ ನೆರಳು ನೀಡಲಿದೆ. ಸಮಾಜದಲ್ಲಿ ಜಾತಿ ವ್ಯವಸ್ಥೆ ಮೂಲಕ ಬಿಕ್ಕಟ್ಟು ಸೃಷ್ಟಿ ಮಾಡಿದೆ. ಹೆಣ್ಣು ಮತ್ತು ಗಂಡು ಎರಡೇ ಜಾತಿ,ನಾವೆಲ್ಲರೂ ಮಾನವ ಜಾತಿ ಎಂದು ತಿಳಿಸಿದರು.
ಕುದ್ರೋಳಿ ಶ್ರೀ ಗೋಕರ್ಣನಾಥೇಶ್ಚರ ದೇವಸ್ಥಾನದ ಕೋಶಾಧಿಕಾರಿ ಪದ್ಮರಾಜ್ ಆರ್. ಪೂಜಾರಿ ಮಾತನಾಡಿ, ಬ್ರಹ್ಮ ಶ್ರೀ ನಾರಾಯಣ ಗುರುಗಳು ಶೋಷಿತ ಸಮಾಜದ ಏಳಿಗೆಗೆ ಶ್ರಮಿಸಿದ ಮಹಾನ್ ಚೇತನ. ನಾರಾಯಣ ಗುರುಗಳ ವಿಚಾರಧಾರೆಗಳನ್ನು ಪ್ರತಿಯೊಬ್ಬರು ಜೀವನದಲ್ಲಿ ಪ್ರಾಮಾಣಿಕವಾಗಿ ಅಳವಡಿಸಿಕೊಳ್ಳುವ ಅಗತ್ಯತೆವಿದೆ ಎಂದು ತಿಳಿಸಿದರು. ವೇದಿಕೆಯಲ್ಲಿ ಜೀರ್ಣೋದ್ಧಾರ ಸಮಿತಿ ಗೌರವಾಧ್ಯಕ್ಷ ಡಾ.ಪ್ರಭಾಕರ್ ಭಟ್ ಕಲ್ಲಡ್ಕ, ಅಧ್ಯಕ್ಷ ನಾರಾಯಣ ಪೂಜಾರಿ ನಿಡ್ಯ, ಬ್ರಹ್ಮ ಶ್ರೀ ನಾರಾಯಣ ಗುರು ಸೇವಾ ಟ್ರಸ್ಟ್ ನ( ರಿ) ಅಧ್ಯಕ್ಷ ಎ.ರುಕ್ಮಯ ಪೂಜಾರಿ, ಕಾರ್ಯದರ್ಶಿ ಮೋಹನ್ ಪಿ.ಎಸ್. ಬರಿಮಾರು ಮಹಾಮ್ಮಾಯಿ ದೇವಸ್ಥಾನದ ಅನುವಂಶಿಕ ಆಡಳಿತ ಮೊಕ್ತೇಸರ ರಾಕೇಶ್ ಪ್ರಭು ಸೇರಿದಂತೆ ಹಲವರು ಉಪಸ್ಥಿತರಿದ್ದರು. ಇದೇ ವೇಳೆ ಸ್ಥಳೀಯ ಅಂಗನವಾಡಿ ಮಕ್ಕಳಿಂದ ಮತ್ತು ಇತರ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು.