ಮಂಗಳೂರು/ಉಡುಪಿ/ಕಾಸರಗೋಡು : ಕರಾವಳಿ ಕರ್ನಾಟಕ ಹಾಗೂ ಕೇರಳದ ಗಡಿಭಾಗಗಳಲ್ಲಿ ಮುಂಗಾರು ಪೂರ್ವ ಮಳೆ ತೀವ್ರಗೊಂಡಿದ್ದು, ಮಂಗಳೂರು, ಉಡುಪಿ ಮತ್ತು ಕಾಸರಗೋಡು ಜಿಲ್ಲೆಗಳಲ್ಲಿ ಶನಿವಾರ ರಾತ್ರಿ ಗುಡುಗು, ಮಿಂಚು ಹಾಗೂ ಬಿರುಗಾಳಿಯೊಂದಿಗೆ ಉತ್ತಮ ಮಳೆಯಾಗಿದೆ. ಹಲವು ಕಡೆ ಮರಗಳು ಉರುಳಿ ಬಿದ್ದಿದ್ದು, ವಿದ್ಯುತ್ ವ್ಯತ್ಯಯ ಮತ್ತು ಕೃಷಿ ಹಾನಿ ಸಂಭವಿಸಿದೆ.

ಸುಳ್ಯ ಸೇರಿದಂತೆ ದಕ್ಷಿಣ ಕನ್ನಡ ಜಿಲ್ಲೆಯ ಹಲವು ಭಾಗಗಳಲ್ಲಿ ಭಾರೀ ಮಳೆಯಾಗಿದೆ. ಮಂಗಳೂರು ನಗರದಲ್ಲಿ ರಾತ್ರಿಯಿಡೀ ಬಿರುಗಾಳಿ ಹಾಗೂ ಗುಡುಗು ಸಹಿತ ಮಳೆಯಾದ ಪರಿಣಾಮ, ಕಳೆದ ಕೆಲವು ದಿನಗಳಿಂದ ಕಾಡುತ್ತಿದ್ದ ಬಿಸಿಲಿಗೆ ತಾತ್ಕಾಲಿಕ ವಿರಾಮ ಸಿಕ್ಕಿದೆ. ನಗರದಲ್ಲಿ ಗರಿಷ್ಠ ತಾಪಮಾನ 33.4 ಡಿಗ್ರಿ ಸೆಲ್ಸಿಯಸ್ ದಾಖಲಾಗಿದ್ದು, ಇದು ಸಾಮಾನ್ಯಕ್ಕಿಂತ 0.5 ಡಿಗ್ರಿ ಕಡಿಮೆಯಾಗಿದೆ. ಕನಿಷ್ಠ ತಾಪಮಾನ 25.4 ಡಿಗ್ರಿ ಸೆಲ್ಸಿಯಸ್ ಆಗಿತ್ತು.
ವಿಟ್ಲ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಸಂಜೆ 5.30ರ ಸುಮಾರಿಗೆ ಆರಂಭವಾದ ಭಾರೀ ಮಳೆ ಸುಮಾರು 45 ನಿಮಿಷಗಳ ಕಾಲ ಸುರಿಯಿತು. ಪುತ್ತೂರು ತಾಲೂಕಿನ ಬೆಟ್ಟಂಪಾಡಿ, ಸಂಪ್ಯ, ಕಬಕ, ಉಪ್ಪಿನಂಗಡಿ ಮತ್ತು ಕುಂಬ್ರಾ ಭಾಗಗಳಲ್ಲೂ ಉತ್ತಮ ಮಳೆಯಾಗಿದೆ.
ಉಪ್ಪಿನಂಗಡಿಯಲ್ಲಿ 48 ವಿದ್ಯುತ್ ಕಂಬಗಳಿಗೆ ಹಾನಿ : ಶುಕ್ರವಾರ ಸಂಜೆ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ಉಪ್ಪಿನಂಗಡಿ ಮೆಸ್ಕಾಂ ವಿಭಾಗದಲ್ಲಿ ಭಾರೀ ಹಾನಿಯಾಗಿದೆ. ಒಟ್ಟು 48 ವಿದ್ಯುತ್ ಕಂಬಗಳು ಹಾನಿಗೊಳಗಾಗಿದ್ದು, ಹಲವು ಪ್ರದೇಶಗಳಲ್ಲಿ ಶನಿವಾರವೂ ವಿದ್ಯುತ್ ವ್ಯತ್ಯಯ ಮುಂದುವರಿದಿತ್ತು.
ಹಿರೇಬಂಡಾಡಿ, ಬಜತ್ತೂರು, ಪೆರಿಯಡ್ಕ, ಕೆಮ್ಮಾರ ಮತ್ತು ಪೆರ್ಂಡಾಜೆ ಭಾಗಗಳಲ್ಲಿ ಮರಗಳು ಹಾಗೂ ದೊಡ್ಡ ಕೊಂಬೆಗಳು ವಿದ್ಯುತ್ ತಂತಿಗಳ ಮೇಲೆ ಬಿದ್ದ ಪರಿಣಾಮ ವಿದ್ಯುತ್ ಸರಬರಾಜು ಸ್ಥಗಿತಗೊಂಡಿತ್ತು. ಮೆಸ್ಕಾಂ ಸಿಬ್ಬಂದಿ ಶನಿವಾರದೊಳಗೆ 28 ಕಂಬಗಳನ್ನು ದುರಸ್ತಿ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ.
ಬಿರುಗಾಳಿಯಿಂದ ಹಲವು ಅಡಿಕೆ ಮರಗಳು ಉರುಳಿ ಬಿದ್ದಿದ್ದು, ರೈತರಿಗೆ ಕೃಷಿ ನಷ್ಟ ಉಂಟಾಗಿದೆ. ಪುತ್ತೂರು-ಉಪ್ಪಿನಂಗಡಿ ಮುಖ್ಯ ವಿದ್ಯುತ್ ಮಾರ್ಗವೂ ಹಲವು ಗಂಟೆಗಳ ಕಾಲ ಸ್ಥಗಿತಗೊಂಡಿತ್ತು.
ಉಡುಪಿ ಜಿಲ್ಲೆಯಲ್ಲಿ ಮನೆಗಳಿಗೆ ಹಾನಿ : ಉಡುಪಿ ಜಿಲ್ಲೆಯಲ್ಲಿ ಬಲವಾದ ಗಾಳಿ ಮತ್ತು ಮಳೆಯಿಂದ ಸುಮಾರು 70 ಸಾವಿರ ರೂಪಾಯಿಗೂ ಅಧಿಕ ಹಾನಿ ಸಂಭವಿಸಿದೆ ಎಂದು ಅಂದಾಜಿಸಲಾಗಿದೆ. ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮದಲ್ಲಿ ಪೂರ್ಣಿಮಾ ಎಂಬವರ ಹಸುವಿನ ಮೇಲೆ ಮರ ಬಿದ್ದು ಸಾವನ್ನಪ್ಪಿದೆ. ಹೆಬ್ರಿಯ ಅಮಿತಾ ಭಟ್ ಮತ್ತು ಕಾರ್ಕಳದ ಮಾಧವ ಅವರ ಮನೆಗಳಿಗೆ ಮರ ಉರುಳಿ ಭಾಗಶಃ ಹಾನಿಯಾಗಿದೆ.
ಹೆಬ್ರಿಯ ಗೋಡ್ವಿನ್ ಸುಧೀರ್ ಹಾಗೂ ಕಡ್ತಲದ ಆನಂದ ನಾಯಕ್ ಅವರ ಕೃಷಿ ಬೆಳೆಗಳಿಗೂ ಹಾನಿಯಾಗಿದೆ. ಕಾಪುವಿನಲ್ಲಿ 32.6 ಮಿಮೀ ಮಳೆಯಾಗಿದ್ದು, ಹೆಬ್ರಿ ಮತ್ತು ಕಾರ್ಕಳದಲ್ಲಿ ಕ್ರಮವಾಗಿ 12.7 ಮಿಮೀ ಹಾಗೂ 6.7 ಮಿಮೀ ಮಳೆಯಾಗಿದೆ.
ಕಾಸರಗೋಡಿನಲ್ಲಿ ಮುಂದುವರಿದ ಮಳೆ : ಕಾಸರಗೋಡು ಜಿಲ್ಲೆಯ ಪೆರ್ಲ, ಬದಿಯಡ್ಕ ಮತ್ತು ಕಾಸರಗೋಡು ಪಟ್ಟಣದಲ್ಲಿ ಗುಡುಗು ಸಹಿತ ಮಳೆಯಾಗಿದೆ. ಕುಂಬ್ಳ, ಮಂಜೇಶ್ವರ ಮತ್ತು ಕುಂಜತ್ತೂರು ಭಾಗಗಳಲ್ಲಿ ಸಾಧಾರಣ ಮಳೆಯಾಗಿದೆ.
ಮುಂದಿನ ಮೂರು ದಿನ ಮಳೆಯ ಮುನ್ಸೂಚನೆ : ಭಾರತದ ಹವಾಮಾನ ಇಲಾಖೆ (ಐಎಂಡಿ) ಕರಾವಳಿ ಜಿಲ್ಲೆಗಳಲ್ಲಿ ಮುಂದಿನ ಮೂರು ದಿನಗಳವರೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ ಎಂದು ಮುನ್ಸೂಚನೆ ನೀಡಿದೆ. ತಿರುವನಂತಪುರಂನ ಐಎಂಡಿ ಕೇಂದ್ರದ ಮಾಹಿತಿ ಪ್ರಕಾರ, ಮೇ 15ರವರೆಗೆ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ವಾತಾವರಣ ಮುಂದುವರಿಯುವ ಸಾಧ್ಯತೆಯಿದೆ.