ಉಡುಪಿ, ಮೇ. 09 (DaijiworldNews/AA): ಉಡುಪಿ ನಗರಸಭಾ ವ್ಯಾಪ್ತಿಯ ವಾಣಿಜ್ಯ ಸಂಕೀರ್ಣಗಳು ಮತ್ತು ವಸತಿ ಸಮುಚ್ಚಯಗಳಲ್ಲಿ ಅಗ್ನಿ ಅವಘಡಗಳ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಹಾಗೂ ನಗರದಲ್ಲಿ ತಾಪಮಾನ ಏರಿಕೆಯಾಗುತ್ತಿರುವುದನ್ನು ಗಮನಿಸಿ, ಉಡುಪಿ ನಗರಸಭೆ ಸಾರ್ವಜನಿಕರಿಗೆ ಕಟ್ಟುನಿಟ್ಟಿನ ಅಗ್ನಿ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳುವಂತೆ ಸೂಚಿಸಿದೆ.

ವಾಣಿಜ್ಯ ಮಳಿಗೆಗಳು, ವಸತಿ ಸಮುಚ್ಚಯಗಳು, ಆಸ್ಪತ್ರೆಗಳು, ಕೈಗಾರಿಕೆಗಳು ಮತ್ತು ಗುಜರಿ ಅಂಗಡಿಗಳ ಮಾಲೀಕರು ತಮ್ಮ ಆವರಣದಲ್ಲಿ ಕಡ್ಡಾಯವಾಗಿ 'ಫೈರ್ ಹೈಡ್ರೆಂಟ್' ವ್ಯವಸ್ಥೆ ಹಾಗೂ ಅಗತ್ಯ ಅಗ್ನಿಶಾಮಕ ಉಪಕರಣಗಳನ್ನು ಅಳವಡಿಸಿಕೊಳ್ಳಬೇಕು. ರಾಸಾಯನಿಕ ವಸ್ತುಗಳು ಮತ್ತು ಸುಲಭವಾಗಿ ಬೆಂಕಿ ಹತ್ತಿಕೊಳ್ಳುವಂತಹ ವಸ್ತುಗಳನ್ನು ಸಂಗ್ರಹಿಸಿಡುವ ಗೋದಾಮುಗಳು ಅನಾಹುತಗಳನ್ನು ತಡೆಯಲು ಹೆಚ್ಚಿನ ಮುನ್ನೆಚ್ಚರಿಕೆ ವಹಿಸಬೇಕು ಎಂದು ನಗರಸಭೆ ಪೌರಾಯುಕ್ತರು ಪ್ರಕಟಿಸಿದ್ದಾರೆ.
ಪ್ರತಿಯೊಂದು ಸಂಸ್ಥೆಗಳು ತಮ್ಮ ಸಿಬ್ಬಂದಿಗೆ ಅಗ್ನಿ ಸುರಕ್ಷತೆ ಮತ್ತು ತುರ್ತು ಸಂದರ್ಭಗಳಲ್ಲಿ ಬೆಂಕಿ ನಂದಿಸುವ ಕುರಿತು ಸೂಕ್ತ ತರಬೇತಿ ನೀಡಬೇಕು ಎಂದು ಸೂಚಿಸಲಾಗಿದೆ. ನಗರದಲ್ಲಿ ಯಾವುದೇ ಅಹಿತಕರ ಅಗ್ನಿ ಅವಘಡಗಳು ಸಂಭವಿಸದಂತೆ ತಡೆಯಲು ಎಲ್ಲಾ ಉದ್ಯಮಿಗಳು ಮತ್ತು ಸಾರ್ವಜನಿಕರು ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಪೌರಸಂಸ್ಥೆಯೊಂದಿಗೆ ಸಹಕರಿಸಬೇಕೆಂದು ಪೌರಾಯುಕ್ತರು ಮನವಿ ಮಾಡಿದ್ದಾರೆ.