ಕುಂದಾಪುರ, ಮೇ. 08 (DaijiworldNews/TA): ಪುರಸಭೆ ವ್ಯಾಪ್ತಿಯ ಕೋಡಿ ಭಾಗದಲ್ಲಿ ಗದ್ದೆ, ಬಾವಿಗಳಿಗೆ ಪ್ರತಿವರ್ಷದಂತೆ ಈ ವರ್ಷವೂ ಉಪ್ಪು ನೀರು ನುಗ್ಗುತ್ತಿದ್ದು, ಈ ಬಾರಿಯೂ ಇಲ್ಲಿನ ಜನರಿಗೆ ಉಪ್ಪು ನೀರಿನ ಸಮಸ್ಯೆ ಉಂಟಾಗಿದೆ. ಕೋಡಿ ಹಾಗೂ ಆಸುಪಾಸಿನ ಭಾಗಗಳ ಗದ್ದೆಗಳಿಗೆ ಭಾರೀ ಪ್ರಮಾಣದಲ್ಲಿ ಉಪ್ಪು ನೀರು ನುಗ್ಗುತ್ತಿದೆ. ಇದು ಆಸುಪಾಸಿನ ನೂರಾರು ಮನೆಗಳ ಬಾವಿಗಳಿಗೂ ಸಮಸ್ಯೆ ತಂದೊಡ್ಡಿದೆ. ಬಾವಿ ನೀರು ಸಹ ಸಂಪೂರ್ಣ ಉಪ್ಪು ನೀರಾಗಿದ್ದು, ಬಳಕೆಗೂ ಆಗದ ಪರಿಸ್ಥಿತಿಯಿದೆ. ಇಲ್ಲಿನ ಮನೆಗಳಿಗೆ ಈಗ ಪುರಸಭೆಯಿಂದ ನಳ್ಳಿ ಮೂಲಕ ಕೊಡುವ ನೀರೇ ಆಸರೆಯಾಗಿದೆ. ಮತ್ತೊಂದೆಡೆ ಸೊಳ್ಳೆ ಕಾಟದಿಂದ ಜನರು ಹೈರಾಣಾಗಿದ್ದಾರೆ.

ಉಪ್ಪು ನೀರು ಗದ್ದೆಗಳಲ್ಲಿ ಭಾರೀ ಪ್ರಮಾಣದಲ್ಲಿ ನಿಂತಿರುವುದರಿಂದ ಮುಂದಿನ ಮುಂಗಾರು ಹಂಗಾಮಿನ ಕೃಷಿ ಚಟುವಟಿಕೆಗಳಿಗೆ ಸಿದ್ದತೆ ಆರಂಭಿಸಲು ಹಿನ್ನಡೆಯಾಗಿದೆ. ಗದ್ದೆಗಳ ಸ್ವಚ್ಛತೆ, ಗೊಬ್ಬರ ಹಾಕುವುದು, ಸುಡುಮಣ್ಣು ಹಾಕುವ ಕಾರ್ಯಕ್ಕೆ ಇದರಿಂದ ತೊಂದರೆಯಾಗಿದೆ. ಈ ಉಪ್ಪು ನೀರಿನ ಸಮಸ್ಯೆಯಿಂದಾಗಿಯೇ ಈ ಭಾಗದ ಅನೇಕ ಮಂದಿ ರೈತರು ಎಕರೆ ಗಟ್ಟಲೆ ಗದ್ದೆಗಳನ್ನು ಹಡಿಲು ಬಿಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಕೋಡಿಯ ಹಿನ್ನೀರು ಪ್ರದೇಶಕ್ಕೆ ಹೊಂದಿಕೊಂಡಿರುವ ಗದ್ದೆಗಳು ಈಗ ಸಂಪೂರ್ಣ ಉಪ್ಪು ನೀರಿನಿಂದ ಜಲಾವೃತ ಗೊಂಡಿವೆ. ದಶಕಗಳಿಂದಲೂ ಪ್ರತೀ ವರ್ಷ ಇಲ್ಲಿನ ನಿವಾಸಿಗರಿಗೆ ಈ ಸಮಸ್ಯೆ ಕಾಣಿಸಿಕೊಳ್ಳುತ್ತಿದೆ.
ಕೋಡಿ ಚಕ್ರೇಶ್ವರಿ ದೇವಸ್ಥಾನದ ವಠಾರದಿಂದ ಸೋನ್ಸ್ ಶಾಲೆಯವರೆಗಿನ ನದಿ ಪಾತ್ರದ ಸುಮಾರು 25 ಎಕರೆಗೂ ಮಿಕ್ಕಿ ಕೃಷಿ ಭೂಮಿಗೆ ಈ ಉಪ್ಪು ನೀರಿನಿಂದ ಪ್ರತೀ ವರ್ಷ ಸಮಸ್ಯೆಯಾಗುತ್ತಿದೆ. 50 ಕ್ಕೂ ಮಿಕ್ಕಿ ರೈತರು ಇದರಿಂದ ತೊಂದರೆ ಅನುಭವಿಸುತ್ತಿದ್ದಾರೆ. ನದಿ ಹಾಗೂ ಗದ್ದೆಗಳ ಮಧ್ಯೆ ವಿವಿಧೆಡೆ ನಿರ್ಮಿಸಿರುವ ಕಿಂಡಿ ಅಣೆಕಟ್ಟು ಗಳು ಸರಿಯಿಲ್ಲದ ಕಾರಣದಿಂದ ಕೃಷಿ ಭೂಮಿಗೆ ನೀರು ನುಗ್ಗುತ್ತಿದೆ. ಅದಕ್ಕಾಗಿ ಇಲ್ಲಿ ಶಾಶ್ವತ ಪರಿಹಾರವೆಂಬಂತೆ ನದಿ ದಂಡೆ ನಿರ್ಮಿಸಿ, ಉಪ್ಪು ನೀರು ಒಳಗೆ ಬರುವುದನ್ನು ತಡೆಯಬಹುದು ಎಂದು ಈ ಭಾಗದ ನಿವಾಸಿಗಳು ಆಗ್ರಹಿಸುತಿದ್ದಾರೆ. ಇನ್ನು ಕಳೆದ 11 ವರ್ಷಗಳಿಂದ ನಾಗರಿಕರು ಹೋರಾಟ ಮಾಡಿ, ಮನವಿ ಸಲ್ಲಿಸಿದರೂ ಈ ವಿಚಾರದಲ್ಲಿ ಪುರಸಭೆ ಯಾವುದೇ ಸ್ಪಂದನೆ ನೀಡಿಲ್ಲ ಎಂಬ ಆರೋಪ ಕೂಡ ವ್ಯಕ್ತವಾಗಿದೆ.