ಸುಳ್ಯ, ಮೇ. 08 (DaijiworldNews/TA): ಬೆಂಗಳೂರಿನಿಂದ ಸುಳ್ಯ ಮಾರ್ಗವಾಗಿ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಖಾಸಗಿ ಬಸ್ ಒಂದರ ಚಾಲಕನಿಗೆ ಹೃದಯಾಘಾತವಾಗಿ ಬಸ್ ನಿಯಂತ್ರಣ ತಪ್ಪಿ ಬರೆಗೆ ಗುದ್ದಿ ನಿಂತಿದ್ದು ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾದ ಘಟನೆ ಇಂದು ಮುಂಜಾನೆ ಮಡಿಕೇರಿ ಬಳಿಯ ಕಾಟಿಕೇರಿಯಲ್ಲಿ ನಡೆದಿದೆ.

ಬೆಂಗಳೂರಿನಿಂದ ಕುಕ್ಕೆ ಸುಬ್ರಹ್ಮಣ್ಯಕ್ಕೆ ಹೋಗುವ ಬಸ್ ಚಾಲಕ ಶಿವಕುಮಾರ್ ಅವರಿಗೆ ಇಂದು ಮುಂಜಾನೆ 5 ಗಂಟೆ ಸುಮಾರಿಗೆ ಕಾಟಿಕೇರಿ ಬಳಿ ತಿರುವಿನಲ್ಲಿ ಹೃದಯಾಘಾತವಾಗಿದ್ದು, ಆಗ ಬಸ್ ನಿಯಂತ್ರಣ ತಪ್ಪಿ ಬರೆಗೆ ಒರಗಿ ನಿಂತಿದೆ. ಬಳಿಕ ಬಸ್ ಚಾಲಕ ಕುಳಿತಲ್ಲೇ ಸಾವನ್ನಪ್ಪಿದ್ದಾರೆನ್ನಲಾಗಿದೆ. ಆ ಸಂದರ್ಭ ಚಾಲಕ ಶಿವಕುಮಾರ್ ಬಸ್ ನಿಲ್ಲಿಸಲು ಯತ್ನಿಸಿ ಸಾಧ್ಯವಾಗದಿದ್ದಾಗ ಬದಿಗೆ ಕೊಂಡೊಯ್ದು ಬರೆಗೆ ಗುದ್ದಿಸಿ ನಿಲ್ಲಿಸಿದರೆಂದು ಹೇಳಲಾಗುತ್ತಿದೆ. ಬಸ್ಸಿನಲ್ಲಿ 24 ಮಂದಿ ಪ್ರಯಾಣಿಕರು ಇದ್ದು ಅವರ ಪ್ರಾಣ ಉಳಿಸಲು ಯಶಸ್ವಿಯಾದ ಚಾಲಕ ಬಳಿಕ ಹೃದಯಾಘಾತ ತೀವ್ರತೆಯಿಂದ ಕೊನೆಯುಸಿರೆಳೆದರು.