ಉಡುಪಿ, ಮೇ. 07 (DaijiworldNews/TA): ಜಿಲ್ಲೆಯಲ್ಲಿ ಗುರುವಾರ ಭಾರೀ ಮಳೆಯಾಗಿದ್ದು, ಬಿಸಿಲ ಬೇಗೆಗೆ ಬೆಂದ ಜನರು ನಿಟ್ಟುಸಿರು ಬಿಟ್ಟಿದ್ದಾರೆ. ಉಡುಪಿ ನಗರ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬಲವಾದ ಗಾಳಿ ಮತ್ತು ಗುಡುಗು ಸಹಿತ ಭಾರೀ ಮಳೆಯಾಗಿದೆ.

ಕಳೆದ ಕೆಲವು ವಾರಗಳಿಂದ ಬಿಸಿಲಿನ ವಾತಾವರಣದಿಂದ ಗರಿಷ್ಟ ತಾಪಮಾನದಿಂದ ಬಳಲುತ್ತಿದ್ದ ಜನರಿಗೆ ಕೊಂಚ ವಿಶ್ರಾಂತಿ ಸಿಕ್ಕಿದಂತಾಗಿದೆ. ಭಾರೀ ಮಳೆಯಿಂದಾಗಿ ನಗರದ ಕೆಲವು ತಗ್ಗು ಪ್ರದೇಶಗಳಲ್ಲಿ ತಾತ್ಕಾಲಿಕವಾಗಿ ನೀರು ನಿಂತಿದ್ದು, ವಾಹನ ಚಾಲಕರು ಮತ್ತು ಪಾದಾಚಾರಿಗಳು ಪರದಾಡುವಂತಾಯಿತು.
ಭಾರತ ಹವಾಮಾನ ಇಲಾಖೆ ಪ್ರಕಾರ, ಮುಂದಿನ ಕೆಲವು ದಿನಗಳಲ್ಲಿ ಕರಾವಳಿ ಕರ್ನಾಟಕದಾದ್ಯಂತ ಮುಂಗಾರು ಪೂರ್ವ ಮಳೆ ಮುಂದುವರಿಯುವ ಸಾಧ್ಯತೆಯಿದೆ, ಇನ್ನು ಕೆಲವು ಸ್ಥಳಗಳಲ್ಲಿ ಮತ್ತಷ್ಟು ಮಳೆ ಹಾಗು ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ.