ಮಂಗಳೂರು, ಮೇ. 05 (DaijiworldNews/TA): ಗುರುಪುರ- ಕೈಕಂಬ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿಯಿಂದಾಗಿ ಗುರುಪುರ, ಗಂಜಿಮಠ, ಅದ್ಯಪಾಡಿ, ಕಂದಾವರ, ಪಡುಪೆರಾರ ಮೊದಲಾದ ಕಡೆ ನೀರಿನ ಸಮಸ್ಯೆ ಇರುವುದರಿಂದ ಅಗತ್ಯ ಕ್ರಮ ಕೈಗೊಳ್ಳುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ ಉಪಸ್ಥಿತಿಯಲ್ಲಿ ಮಂಗಳೂರು ತಾಲೂಕು ಪಂಚಾಯತ್ ವ್ಯಾಪ್ತಿಯ ಪ್ರತ್ಯೇಕ ಸಭೆಗೆ ಶಾಸಕ ಡಾ. ಭರತ್ ಶೆಟ್ಟಿ ನಿರ್ದೇಶನ ನೀಡಿದರು.

ಮಂಗಳೂರು ತಾಲೂಕು ಪಂಚಾಯತ್ ಸಭಾಂಗಣದಲ್ಲಿ ಮಂಗಳವಾರ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಗುರುಪುರ ಭಾಗದಲ್ಲಿ ರಾಷ್ಟ್ರೀಯ ಹೆದ್ದಾರಿ ಕಾಮಗಾರಿ ನಡೆಯುತ್ತಿದ್ದು, ಅಲ್ಲಿ ನೀರಿನ ಪೈಪ್ ಅಳವಡಿಕೆಗೆ ಯುಟಿಲಿಟಿ ವ್ಯವಸ್ಥೆಯನ್ನು ಮಾಡಲಾಗಿಲ್ಲ. ಪಂಚಾಯತ್ ವತಿಯಿಂದ ಕ್ರಮ ವಹಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಆ ಭಾಗದ ಕೆಲ ಕಡೆ ನೀರಿನ ಸಮಸ್ಯೆ ಎದುರಾಗಿದೆ ಎಂದು ನೀರು ಪೂರೈಕೆ ವಿಭಾಗದ ಇಂಜಿನಿಯರ್ ಸಭೆಗೆ ಮಾಹಿತಿ ನೀಡಿದರು.
ಇದಕ್ಕೆ ಪ್ರತಿಕ್ರಿಯಿಸಿದ ಶಾಸಕ ಡಾ. ಭರತ್, ಯಾವುದೇ ಸಮಸ್ಯೆ ಇದ್ದರೂ ಅದನ್ನು ಬಗೆಹರಿಸಿ ಸಾರ್ವಜನಿಕರಿಗೆ ನೀರು ಕೊಡುವುದು ನಮ್ಮ ಕರ್ತವ್ಯ. ಈ ಬಗ್ಗೆ ಜಿಲ್ಲಾಧಿಕಾರಿ ಗಮನಕ್ಕೆ ತರಲಾಗಿದೆ ಎಂದು ಪ್ರಶ್ನಿಸಿದ ಅವರು, ಸಮಸ್ಯೆ ಬಗೆಹರಿಸಲು ಕ್ರಮ ವಹಿಸಬೇಕಿದೆ ಎಂದರು. ಗುರುಪುರ, ಮುತ್ತೂರು, ಮುಚ್ಚೂರು, ಉಳಾಯಿಬೆಟ್ಟು, ಬಡಗ ಎಡಪದವು, ಎಡಪದವು ಗ್ರಾಪಂಗಳಿಗೆ ಬಹು ಗ್ರಾಮ ಕುಡಿಯುವ ನೀರು ಸರಬರಾಜು ಮಾಡಲಾಗುತ್ತಿದ್ದು, ಬೇಸಿಗೆ ಕಾಲದಲ್ಲಿ ನೀರಿನ ಅಭಾವ ಇರುವುದರಿಂದ ನೀರಿನ ಸರಬರಾಜಿನಲ್ಲಿ ಏರುಪೇರಾಗುತ್ತಿದೆ ಎಂದು ಅಧಿಕಾರಿಗಳು ಸಭೆಗೆ ಮಾಹಿತಿ ನೀಡಿದರು.