ಮಂಗಳೂರು, ಏ. 05 (DaijiworldNews/AA): ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ ವಾಣಿಜ್ಯ ಎಲ್ಪಿಜಿ ಸಿಲಿಂಡರ್ಗಳ ಅಭಾವದ ಹಿನ್ನೆಲೆಯಲ್ಲಿ ಹೋಟೆಲ್ಗಳು ಆಹಾರ ಪದಾರ್ಥಗಳ ಬೆಲೆಯನ್ನು ಏರಿಕೆ ಮಾಡುತ್ತಿದ್ದು, ಗ್ರಾಹಕರಿಗೆ ಸಂಕಷ್ಟ ತಂದೊಡ್ಡಿದೆ. ಇದೇ ವೇಳೆ ಗೃಹಬಳಕೆಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲೂ ವ್ಯತ್ಯಯ ಉಂಟಾಗಿದ್ದು, ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದೆ.

ವಾಣಿಜ್ಯ ಸಿಲಿಂಡರ್ಗಳ ಕೊರತೆಯಿಂದಾಗಿ ಅನೇಕ ಹೋಟೆಲ್ ಮಾಲೀಕರು ಅನಿವಾರ್ಯವಾಗಿ ಬ್ಲ್ಯಾಕ್ ಮಾರ್ಕೆಟ್ ಅನ್ನು ಅವಲಂಬಿಸುವಂತಾಗಿದೆ. ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಒಂದು ಸಿಲಿಂಡರ್ಗೆ 4,000 ರೂ. ವರೆಗೆ ದರ ವಸೂಲಿ ಮಾಡಲಾಗುತ್ತಿದೆ ಎಂದು ವರದಿಯಾಗಿದೆ. ಈ ವೆಚ್ಚವನ್ನು ಸರಿದೂಗಿಸಲು ಹೋಟೆಲ್ ಮಾಲೀಕರು ಆಹಾರದ ದರವನ್ನು ಶೇ. 10 ರಿಂದ ಶೇ. 25 ರಷ್ಟು ಹೆಚ್ಚಿಸಿದ್ದಾರೆ.
ಪೂರೈಕೆ ಕುಸಿದಿರುವುದರಿಂದ, ಹೋಟೆಲ್ ನಡೆಸಲು ಮಾಲೀಕರು ದುಬಾರಿ ಬೆಲೆ ತೆತ್ತು ಬ್ಲ್ಯಾಕ್ ಮಾರ್ಕೆಟ್ ನಲ್ಲಿ ಸಿಲಿಂಡರ್ ಖರೀದಿಸುತ್ತಿದ್ದಾರೆ. ಗ್ಯಾಸ್ ಏಜೆನ್ಸಿಗಳ ಮುಂದೆ ಪ್ರತಿಭಟನೆ ನಡೆಸಿರುವ ಉದ್ಯಮಿಗಳು, ಈ ಅಭಾವವನ್ನು ಕೂಡಲೇ ನೀಗಿಸುವಂತೆ ಆಗ್ರಹಿಸಿದ್ದಾರೆ.
ಬೆಲೆ ಏರಿಕೆಯನ್ನು ನಿಯಂತ್ರಿಸಲು ಹೋಟೆಲ್ಗಳಲ್ಲಿ ದರ ಪಟ್ಟಿ ಪ್ರದರ್ಶಿಸುವಂತೆ ಗ್ರಾಹಕರು ಒತ್ತಾಯಿಸುತ್ತಿದ್ದರೂ, ಅನೇಕ ಪ್ರಮುಖ ಹೋಟೆಲ್ಗಳು ಇದನ್ನು ಪಾಲಿಸುತ್ತಿಲ್ಲ. ಎಲ್ಪಿಜಿ ಅಭಾವದ ನೆಪದಲ್ಲಿ ಮನಬಂದಂತೆ ದರ ಏರಿಸದಂತೆ ಕೇಂದ್ರ ಗ್ರಾಹಕ ಸಂರಕ್ಷಣಾ ಪ್ರಾಧಿಕಾರವು ಎಚ್ಚರಿಕೆ ನೀಡಿದ್ದರೂ, ನಿಯಮಗಳ ಉಲ್ಲಂಘನೆ ಮುಂದುವರಿಯುತ್ತಿದೆ ಎಂದು ಗ್ರಾಹಕರು ದೂರಿದ್ದಾರೆ.
ಸಿಲಿಂಡರ್ಗಳ ಕೊರತೆಯಿಂದಾಗಿ ಕೆಲವು ಹೋಟೆಲ್ಗಳು ಮುಚ್ಚುವ ಹಂತಕ್ಕೆ ತಲುಪಿವೆ. ಮಧ್ಯಾಹ್ನದ ವೇಳೆಗೆ ಬಾಗಿಲು ಹಾಕುತ್ತಿರುವ ಹೋಟೆಲ್ಗಳು, ಲಭ್ಯವಿರುವ ಅಲ್ಪ ಪ್ರಮಾಣದ ಗ್ಯಾಸ್ ಬಳಸಿ ಕೇವಲ ಆಯ್ದ ತಿಂಡಿಗಳನ್ನು ಮಾತ್ರ ತಯಾರಿಸುತ್ತಿವೆ.
ಗಗನಕ್ಕೇರಿದ ಆಹಾರದ ಬೆಲೆ:
ಕಳೆದ 15 ದಿನಗಳಲ್ಲಿ ಜಿಲ್ಲೆಯ ಹೋಟೆಲ್ಗಳಲ್ಲಿ ಬೆಲೆಗಳು ಗಣನೀಯವಾಗಿ ಏರಿಯಾಗಿದೆ. ಚಹಾ ಬೆಲೆ 15 ರೂ. ನಿಂದ 20 ರೂ. ಗೆ ಏರಿಕೆಯಾಗಿದ್ದರೆ, ಬಜ್ಜಿ ಬೆಲೆ ಪ್ರತಿ ಪ್ಲೇಟ್ಗೆ 15 ರೂ. ನಿಂದ 25 ರೂ. ಗೆ ಏರಿಕೆ ಯಾಗಿದೆ. ಚಪಾತಿ, ಊಟ ಮತ್ತು ಇತರ ಅನ್ನದ ಪದಾರ್ಥಗಳ ಬೆಲೆಯಲ್ಲೂ ಗಣನೀಯ ಏರಿಕೆ ಕಂಡುಬಂದಿದೆ.
ಎಲ್ಪಿಜಿ ಬ್ಲ್ಯಾಕ್ ಮಾರ್ಕೆಟ್ ಗೆ ಕಡಿವಾಣ ಹಾಕಿ, ಗ್ಯಾಸ್ ಪೂರೈಕೆಯನ್ನು ಸಹಜ ಸ್ಥಿತಿಗೆ ತರುವಂತೆ ನಿವಾಸಿಗಳು ಕೇಂದ್ರ ಮತ್ತು ರಾಜ್ಯ ಸರ್ಕಾರಗಳನ್ನು ಒತ್ತಾಯಿಸಿದ್ದಾರೆ.