ಮಂಗಳೂರು, ಏ. 05 (DaijiworldNews/AA): ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಲ್ಲಿ ಕಳೆದ ಕೆಲವು ವರ್ಷಗಳಿಂದ ಇಲಿ ಜ್ವರ ಪ್ರಕರಣಗಳ ಸಂಖ್ಯೆಯಲ್ಲಿ ಏರಿಳಿತ ಉಂಟಾಗುತ್ತಿದ್ದು, ಕಳೆದ ಮೂರು ವರ್ಷಗಳಲ್ಲಿ ಒಟ್ಟು 1,700 ಪ್ರಕರಣಗಳು ದೃಢಪಟ್ಟಿವೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 751 ಪ್ರಕರಣಗಳು ಹಾಗೂ ಉಡುಪಿ ಜಿಲ್ಲೆಯಲ್ಲಿ 949 ಪ್ರಕರಣಗಳು ಪತ್ತೆಯಾಗಿದೆ. ಇನ್ನು ಪ್ರಸಕ್ತ ವರ್ಷ ದಕ್ಷಿಣ ಕನ್ನಡದಲ್ಲಿ 13 ಮತ್ತು ಉಡುಪಿಯಲ್ಲಿ 11 ಪ್ರಕರಣಗಳು ವರದಿಯಾಗಿವೆ. ಕೆಲವೇ ಕೆಲವು ತಿಂಗಳಲ್ಲಿ ಮಳೆಗಾಲ ಆರಂಭವಾಗಲಿದ್ದು, ಇದು ಇಲಿ ಜ್ವರ ಹರಡಲು ಪೂರಕ ವಾತಾವರಣವನ್ನು ನಿರ್ಮಿಸುತ್ತದೆ.
ಮಳೆಗಾಲದಲ್ಲಿ ನೆರೆ ಬಂದಾಗ ಇಲಿಗಳು ತಮ್ಮ ಬಿಲಗಳಿಂದ ಹೊರಬರುತ್ತವೆ, ಇದರಿಂದಾಗಿ ಕಲುಷಿತ ನೀರು ಮನುಷ್ಯರ ಸಂಪರ್ಕಕ್ಕೆ ಬರುವ ಸಾಧ್ಯತೆ ಹೆಚ್ಚು. ಇಲಿಗಳ ಮೂತ್ರದಲ್ಲಿರುವ 'ಲೆಪ್ಟೊಸ್ಪೈರಾ' ಎಂಬ ಬ್ಯಾಕ್ಟೀರಿಯಾ ಮಳೆನೀರು ಅಥವಾ ನಿಂತ ನೀರಿನಲ್ಲಿ ಬೆರೆತಾಗ ಈ ಸೋಂಕು ಹರಡುತ್ತದೆ.
ಗ್ರಾಮೀಣ ಭಾಗಕ್ಕಿಂತ ನಗರ ಪ್ರದೇಶಗಳಲ್ಲೇ ಹೆಚ್ಚು ಪ್ರಕರಣಗಳು ಕಂಡುಬರುತ್ತಿದ್ದು, ಅಸಮರ್ಪಕ ನೈರ್ಮಲ್ಯ ಮತ್ತು ತ್ಯಾಜ್ಯ ನಿರ್ವಹಣೆಯೇ ಇದಕ್ಕೆ ಮುಖ್ಯ ಕಾರಣವಾಗಿದೆ. ಹೋಟೆಲ್ಗಳ ಆಹಾರ ತ್ಯಾಜ್ಯವನ್ನು ಚರಂಡಿಗಳಿಗೆ ಸುರಿಯುವುದು, ಬೀದಿನಾಯಿಗಳಿಗೆ ಎಲ್ಲೆಂದರಲ್ಲಿ ಆಹಾರ ನೀಡುವುದು ಹೀಗೆ ವಿವಿಧ ಕಾರಣಗಳಿಂದ ಕಾಯಿಲೆ ಹರಡುತ್ತದೆ.
ಆರೋಗ್ಯ ಇಲಾಖೆಯು ಆಶಾ ಕಾರ್ಯಕರ್ತೆಯರು ಮತ್ತು ಆರೋಗ್ಯ ಸಹಾಯಕದ ಮೂಲಕ ಮನೆ-ಮನೆಗೆ ಭೇಟಿ ನೀಡಿ ಜಾಗೃತಿ ಮೂಡಿಸುತ್ತಿದೆ. ಶೇ. 20ರಷ್ಟು ಪ್ರಕರಣಗಳು ಗಂಭೀರ ಸ್ವರೂಪ ಪಡೆದು ಅಂಗಾಂಗ ವೈಫಲ್ಯಕ್ಕೆ ಕಾರಣವಾಗಬಹುದು. ನಿಂತ ಮಳೆನೀರಿನಲ್ಲಿ ಮಕ್ಕಳು ಆಟವಾಡದಂತೆ ಪೋಷಕರು ಜಾಗ್ರತೆ ವಹಿಸಬೇಕು. ಇನ್ನು ಈ ರೋಗವು ಮನುಷ್ಯರಿಂದ ಮನುಷ್ಯರಿಗೆ ಹರಡುವುದಿಲ್ಲ.
ಇಲಿ ಜ್ವರಕ್ಕೆ ಪರಿಣಾಮಕಾರಿ ಚಿಕಿತ್ಸೆ ಲಭ್ಯವಿದೆ. ಸಕಾಲದಲ್ಲಿ ವೈದ್ಯಕೀಯ ನೆರವು ಪಡೆದರೆ ಇದನ್ನು ಸಂಪೂರ್ಣವಾಗಿ ಗುಣಪಡಿಸಬಹುದು. ಸಾರ್ವಜನಿಕರು ನೈರ್ಮಲ್ಯ ಕಾಪಾಡಿಕೊಳ್ಳಬೇಕು ಮತ್ತು ಕಲುಷಿತ ನೀರಿನ ಸಂಪರ್ಕದಿಂದ ದೂರವಿರಬೇಕು.