ಕಾಸರಗೋಡು, ಏ. 05 (DaijiworldNews/TA): ವಿಧಾನ ಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಅಶ್ವಿನಿ ಎಂ.ಎಲ್. ಅವರ ಪರವಾಗಿ ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಅವರು ಕಾಸರಗೋಡು ನಗರಪಾಲಿಕೆ ವ್ಯಾಪ್ತಿಯ ಅಡ್ಕತ್ ಬೈಲು ಗ್ರಾಮದ ಅರ್ಜಾಲ್ ಭಾಗದಲ್ಲಿ ಮನೆ ಮನೆಗೆ ತೆರಳಿ ಮತಯಾಚಿಸಿದರು.

ಕ್ಷೇತ್ರದ ಅಭಿವೃದ್ಧಿ ಮತ್ತು ಬದಲಾವಣೆಗಾಗಿ ಬಿಜೆಪಿ ಅಭ್ಯರ್ಥಿಗೆ ಮತ ನೀಡುವಂತೆ ಮನವಿ ಮಾಡಿದರು. ಕಾಸರಗೋಡು ಬಿಜೆಪಿ ಪಕ್ಷದ ಕಚೇರಿ ಹಾಗೂ ಮದೂರು ಗ್ರಾ.ಪಂ.ವ್ಯಾಪ್ತಿಯ ಬಿಜೆಪಿ ಪಕ್ಷದ ಕಚೇರಿಗೆ ತೆರಳಿದ ಅವರು ಅಲ್ಲಿನ ಪಕ್ಷದ ಪ್ರಮುಖರ ಜೊತೆ ಚುನಾವಣಾ ಪ್ರಚಾರದ ಕುರಿತು ಸಮಾಲೋಚನೆ ನಡೆಸಿದರು. ಮದೂರು ಭಾಗದಲ್ಲಿ ಮಾಜಿ ಸಂಸದ ನಳಿನ್ ಕುಮಾರ್ ಜೊತೆಗೆ ಅಲ್ಲಿನ ಪ್ರಮುಖ ಕಾರ್ಯಕರ್ತರ ಜೊತೆಗೆ ಚರ್ಚಿಸಿದ ಅವರು ಸಂಜೆ ವೇಳೆ ಮಂಜೇಶ್ವರ ವಿಧಾನ ಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಸುರೇಂದ್ರನ್ ಅವರ ಜೊತೆಯಲ್ಲಿ ಚುನಾವಣಾ ವಿಚಾರವಾಗಿ ಕೆಲಹೊತ್ತು ಮಾತುಕತೆ ನಡೆಸಿದರು.
ಈ ಸಂದರ್ಭದಲ್ಲಿ ಪನ್ವೆಲ್ ಕಾರ್ಪೋರೆಟರ್ ಸಂತೋಷ್ ಶೆಟ್ಟಿ ದಳಂದಿಲ, ಕಾಸರಗೋಡು ವಲಯ ಬಂಟರ ಸಂಘದ ಅಧ್ಯಕ್ಷ ಸುಬ್ಬಣ್ಣ ಅಳ್ವ, ಪ್ರಮುಖರಾದ ಅಶೋಕ್ ನಾಯ್ಕ್, ಮಹಾಬಲ ರೈ, ರವೀಂದ್ರ ರೈ, ಧನುಷ್ ಶೆಟ್ಟಿ ದೆಹಲಿ ಹಾಗೂ ಪವನ್ ದೆಹಲಿ ಅವರು ಉಪಸ್ಥಿತರಿದ್ದರು.