ಬಂಟ್ವಾಳ, ಏ. 05 (DaijiworldNews/TA): ಪೇಟೆಯಲ್ಲಿರುವ ನಂದನಹಿತ್ಲು ಶ್ರೀ ವೈದ್ಯನಾಥ, ಅರಸು, ಜುಮಾದಿ ಬಂಟ ದೈವಸ್ಥಾನದಲ್ಲಿ ಶ್ರೀ ವೈದ್ಯನಾಥ ದೈವದ ನೇಮೋತ್ಸವವು ಶುಕ್ರವಾರ ರಾತ್ರಿ ಭಕ್ತ ಸಮೂಹ, ಗಣ್ಯರ ಸೇರುವಿಕೆಯಲ್ಲಿ ಸಂಭ್ರಮದಿಂದ ಸಂಪನ್ನಗೊಂಡಿತು.


ಇದಕ್ಕೂ ಮೊದಲು ಸಂಜೆಯಿಂದ ರಾತ್ರಿ 9 ಗಂಟೆಯವರೆಗೆ ವಿವಿಧ ಭಜನಾ ತಂಡಗಳಿಂದ ಭಜನಾ ಸಂಕೀರ್ತನೆ ನಡೆಯಿತು. ಬಳಿಕ ಇಲ್ಲಿನ ಪ್ರಮುಖ ದೈವ ಶ್ರೀ ವೈದ್ಯನಾಥನಿಗೆ ನರ್ತನ ಸೇವೆ ನಡೆಯಿತು. ಈ ಸಂದರ್ಭದಲ್ಲಿ ಪೊಳಲಿ ಗಿರಿಪ್ರಕಾಶ್ ತಂತ್ರಿಯವರು, ದೈವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ಗಣೇಶ್ ಸುವರ್ಣ ತುಂಬೆ, ನಾಲ್ಕು ಮನೆತನದವರಾದ ವಿಶ್ವನಾಥ ಪೊಣ್ಣಂಗಿಲಗುತ್ತು, ಲೋಕೇಶ್ ಬಂಗೇರ ಗಾಣದಪಡ್ಪು, ಲೋಕನಾಥ ಬಡಕೊಟ್ಟು, ಸಂಜೀವ ಪೆಲತ್ತಿಮಾರು, ಬಾಳಿಗಾ ಮನೆತನದ ಸುಧೀರ್ ಬಾಳಿಗಾ, ಶಶಿಕಿರಣ್ ತುಂಬೆ, ಮಹಾಬಲ ಬಂಗೇರ ಹಾಗೂ ಸ್ಥಳೀಯ ಪ್ರಮುಖರು ಉಪಸ್ಥಿತರಿದ್ದರು.
ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪಾಡಿ,ಮಾಜಿ ಸಚಿವ ಬಿ.ರಮಾನಾಥ ರೈ, ಕುದ್ರೋಳಿ ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್ ಪೂಜಾರಿ,ಶಿಲ್ಪಿ ಸದಾಶಿವ ಶೆಣೈ ಸಹಿತ ಹಲವಾರು ಗಣ್ಯರು ಅಗಮಿಸಿ ದೈವದ ಗಂಧ ಪ್ರಸಾದ ಸ್ವೀಕರಿಸಿದರು. ನಡುರಾತ್ರಿ ಮಕ್ಕಳ ಕಂಚಿಲ ಸೇವೆ, ಶನಿವಾರ ಮುಂಜಾನೆ ಬಂಡಿ ಸಹಿತ ವೈದ್ಯನಾಥ ದೈವದ ಪೇಟೆ ಸವಾರಿ ಉತ್ಸವ ನಡೆಯಿತು. ನೂರಾರು ಸಂಖ್ಯೆಯಲ್ಲಿ ಭಕ್ತರು ಬಂಡಿ ಸಹಿತ ವೈದ್ಯನಾಥ ದೈವದ ಪೇಟೆ ಸವಾರಿ ಉತ್ಸವವನ್ನು ಕಣ್ತುಂಬಿಕೊಂಡರು.