ಮಂಗಳೂರು, ಏ. 04 (DaijiworldNews/TA): ಮೂಡಿಗೆರೆ ತಾಲೂಕಿನ ನಿಡುವಾಳೆ ಗ್ರಾಮದ ಪ್ರತಿಭಾನ್ವಿತ ವಿದ್ಯಾರ್ಥಿನಿ ಕುಮಾರಿ ರಿಷಲ್ ತಾವ್ರೊ ಅವರು ಬಿ.ಟೆಕ್ ಪದವಿಯಲ್ಲಿ ಪ್ರಥಮ ರ್ಯಾಂಕ್ ಪಡೆದು ಚಿನ್ನದ ಪದಕ ಗೆದ್ದಿದ್ದಾರೆ. ಮಂಗಳೂರಿನ ಪ್ರತಿಷ್ಠಿತ ಶ್ರೀನಿವಾಸ ಕಾಲೇಜಿನ ವಿದ್ಯಾರ್ಥಿನಿಯಾಗಿರುವ ರಿಷಲ್, ತನ್ನ ಶೈಕ್ಷಣಿಕ ಸಾಧನೆಯ ಮೂಲಕ ತಮ್ಮ ಗ್ರಾಮಕ್ಕೆ ಹೆಮ್ಮೆ ತಂದಿದ್ದಾರೆ.

ಇತ್ತೀಚೆಗೆ ನಡೆದ ಘಟಿಕೋತ್ಸವದಲ್ಲಿ ರಿಷಲ್ ತಾವ್ರೊ ಅವರ ಅತ್ಯುತ್ತಮ ಸಾಧನೆಯನ್ನು ಪರಿಗಣಿಸಿ, ಪ್ರಥಮ ರ್ಯಾಂಕ್ ಹಾಗೂ ಚಿನ್ನದ ಪದಕ ನೀಡಿ ಗೌರವಿಸಲಾಯಿತು. ಅವರ ಈ ಸಾಧನೆ ಶಿಕ್ಷಣ ಕ್ಷೇತ್ರದಲ್ಲಿ ಶ್ರಮ, ಸಮರ್ಪಣೆ ಮತ್ತು ದೃಢನಿಶ್ಚಯದ ಪ್ರತಿಫಲವಾಗಿದೆ.
ರಿಷಲ್ ತಾವ್ರೊ ಅವರು ನಿಡುವಾಳೆಯ ಜೆ.ಎಂ.ಜೆ ಫ್ಯಾನ್ಸಿ ಸ್ಟೋರ್ಸ್ ಮಾಲೀಕರಾದ ಜೋಸೆಫ್ ತಾವ್ರೊ ಹಾಗೂ ರೋಸ್ಲಿನ್ ದಂಪತಿಯ ಪುತ್ರಿಯಾಗಿದ್ದಾರೆ. ಮಗಳ ಈ ಗಣನೀಯ ಸಾಧನೆಯಿಂದ ಪೋಷಕರು ಹಾಗೂ ಗ್ರಾಮಸ್ಥರು ಹರ್ಷ ವ್ಯಕ್ತಪಡಿಸಿದ್ದಾರೆ.