ಬೆಳ್ತಂಗಡಿ, ಏ. 03 (DaijiworldNews/TA): ತುಳುನಾಡಿನಲ್ಲಿ ದೈವಾರಾಧನೆ, ನಾಗಾರಾಧನೆ, ದೇವತಾರಾಧನೆಯಷ್ಟೇ ಸಿರಿ ಆರಾಧನೆಗೂ ಮಹತ್ವವಿದೆ. ಅಂತೆಯೇ ಬೆಳ್ತಂಗಡಿ ತಾಲೂಕಿನ ನಿಡಿಗಲ್ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದಲ್ಲಿ ಸಿರಿಜಾತ್ರೆ ವೈಭವದಿಂದ ನಡೆಯಿತು.

ನಿಡಿಗಲ್ನಲ್ಲಿ ವಾರ್ಷಿಕ ಸಿರಿಜಾತ್ರೆಯು ಪ್ರತೀ ವರ್ಷ ಮಾರ್ಚ್ ಅಥವಾ ಎಪ್ರಿಲ್ ತಿಂಗಳ ಹುಣ್ಣಿಮೆಯಂದು ನಡೆಯುತ್ತದೆ. ಅದರಂತೆ ಎಪ್ರೀಲ್ ೨ರ ರಾತ್ರಿ ಇಲ್ಲಿ ನಡೆದ ಸಿರಿಜಾತ್ರೆಯ ಪ್ರಯುಕ್ತ ಸಿರಿ ಬಳಗಕ್ಕೆ ಸೇರಿದ ನೂರಾರು ಮಹಿಳೆಯರು ಸಿರಿ ಆವೇಶದಲ್ಲಿ ನಿರತರಾಗಿದ್ದರು. ಸಿರಿ ಜಾತ್ರೆಯ ಪ್ರಮುಖ ಘಟ್ಟ ಸಿರಿಗಳ ದಲ್ಯ ಸೇವೆ. ಸಿರಿ ಬಳಗಕ್ಕೆ ಸೇರಿದ ಮಹಿಳೆಯರು, ಪುರುಷರು ಸಂಜೆಯಾಗುತ್ತಿದ್ದಂತೆ ನಿಡ್ಗಲ್ ಕ್ಷೇತ್ರದಲ್ಲಿ ಸೇರಿದ್ದರು.
ರಾತ್ರಿಯಾಗುತ್ತಿದ್ದಂತೆ ಸ್ನಾನ ಮಾಡಿ ಮಹಿಳೆಯರು ಬಿಳಿಯ ಬಣ್ಣದ ಸೀರೆ ಉಟ್ಟು, ತಲೆ ತುಂಬಾ ಮಲ್ಲಿಗೆ ಮುಡಿದು ದಲ್ಯ ಸೇವೆಗೆ ಅಣಿಯಾದರೆ, ಪುರುಷರು ಕೆಂಪು ಬಣ್ಣದ ವಸ್ತ್ರವನ್ನು ಉಟ್ಟು ಆವೇಶ ಹೊಂದುವ ಕ್ರಿಯೆಗೆ ಸಿದ್ಧರಾದರು. ದೇವರ ಬಲಿ ಉತ್ಸವ ಆದ ತಕ್ಷಣ ದಲ್ಯ ಸೇವೆ ನಡೆಯಿತು. ಕೊನೆಗೆ ಅಬ್ಬಗ-ದಾರಗರ ಚೆನ್ನೆಮಣೆ ಆಟವನ್ನು ಮರುನಿರೂಪಿಸುವ ಕ್ರಿಯೆಯೂ ನಡೆಯಿತು. ಒಟ್ಟಿನಲ್ಲಿ ಸಾವಿರಾರು ಮಂದಿ ಭಕ್ತರು ಸಿರಿಜಾತ್ರೆಯಲ್ಲಿ ಸೇರಿ ಭಕ್ತಿಯಿಂದ ನಡೆದುಕೊಂಡರು.