ಬಂಟ್ವಾಳ, ಏ. 03 (DaijiworldNews/TA): ವಿಕಾಸಂ ಸೇವಾ ಫೌಂಡೇಶನ್ ವತಿಯಿಂದ ಲಯನ್ಸ್ ಕ್ಲಬ್ ಬಂಟ್ವಾಳ ಮತ್ತು ರೋಟರಿ ಕ್ಲಬ್ ಬಂಟ್ವಾಳ ಟೌನ್ ಸಹಯೋಗದಲ್ಲಿ ಗುರುವಾರ ಬಂಟ್ವಾಳ ಲಯನ್ಸ್ ಸೇವಾ ಮಂದಿರದಲ್ಲಿ ವಿಶ್ವ ಆಟಿಸಂ ಜಾಗೃತಿ ದಿನಾಚರಣೆ ನಡೆಯಿತು.

ಕಾರ್ಯಕ್ರಮವನ್ನು ಮಂಗಳೂರು ಸಿವಿಲ್ ಕಾಂಟ್ರಾಕ್ಟರ್ ಅಸೋಸಿಯೇಷನ್ ಅಧ್ಯಕ್ಷರಾದ ಮಹಾಬಲ ಕೊಟ್ಟಾರಿ ಉದ್ಘಾಟಿಸಿ ಮಾತನಾಡಿ, ಆಟಿಸಂ ಕುರಿತು ವಿಕಾಸಂ ಸಂಸ್ಥೆ ತೋರುತ್ತಿರುವ ಕಾಳಜಿಯನ್ನು ಶ್ಲಾಘಿಸಿದರು. ಬಂಟ್ವಾಳ ಸಿಡಿಪಿಒ ಮಮ್ತಾಜ್ ಮಾತನಾಡಿ, ಬೆಳೆಯುವ ಹಂತದಲ್ಲೇ ಆಟಿಸಂ ಗುರುತಿಸುವಿಕೆ ಅಗತ್ಯವಾಗಿದ್ದು, ಇದು ಮುಂದಕ್ಕೂ ಸಹಾಯವಾಗುತ್ತದೆ. ಮಕ್ಕಳ ಗುರುತಿಸುವಿಕೆಯಷ್ಟೇ ಅಲ್ಲ, ಅವರ ಪೋಷಣೆಯ ಕುರಿತು ಹೆತ್ತವರೂ ಅರಿತುಕೊಳ್ಳಬೇಕಾದ ಅಗತ್ಯವಿದೆ. ಇದರ ಕೊಂಡಿಯಾಗಿ ಅಂಗನವಾಡಿ ಕಾರ್ಯಕರ್ತೆಯರು ಕೆಲಸ ಮಾಡುತ್ತಿದ್ದಾರೆ ಎಂದರು.
ಯೇನಪೋಯ ಡೆಂಟಲ್ ಕಾಲೇಜಿನ ಡೀನ್ ಹಾಗೂ ಡೆಂಟಿಸ್ಟ್ರಿ ವಿಭಾಗದ ಪ್ರೊಫೆಸರ್ ಆಗಿರುವ ಡಾ ಶ್ಯಾಮ್ ಎಸ್ ಭಟ್ ಮಾತನಾಡಿ ದಿವ್ಯಾಂಗರಿಗೆ ವೆನ್ಲಾಕ್ ಶಿಫಾರಸು ಮೂಲಕ ಉಚಿತವಾಗಿ ಚಿಕಿತ್ಸೆ ದೊರಕುತ್ತದೆ. ಈ ಕುರಿತು ಮಾಹಿತಿ ನೀಡುವುದು ಅಗತ್ಯವಾಗಿದೆ ಎಂದರು. ಸಕ್ಷಮ ದ.ಕ ಜಿಲ್ಲಾ ಕಾರ್ಯದರ್ಶಿ ಹರೀಶ್ ಪ್ರಭು, ಸಂಸ್ಕಾರ ಭಾರತಿ ದ.ಕ. ಜಿಲ್ಲಾ ಉಪಾಧ್ಯಕ್ಷ ಅನಿಲ್ ಪಂಡಿತ್, ರೋಟರಿ ಕ್ಲಬ್ ಬಂಟ್ವಾಳ ಟೌನ್ ಮಾಜಿ ಅಧ್ಯಕ್ಷ ನಾರಾಯಣ ಸಿ. ಪೆರ್ನೆ, ವಿಕಾಸಂ ಸೇವಾ ಫೌಂಡೇಶನ್ ನ ಸಹಸಂಸ್ಥಾಪಕರಾದ ಧರ್ಮಪ್ರಸಾದ ರೈ ಸೇರಿದಂತೆ ಗಣ್ಯರು ಉಪಸ್ಥಿತರಿದ್ದರು.