ಮೂಡುಬಿದಿರೆ, ಮಾ. 23 (DaijiworldNews/TA): ಮಹಿಳೆಯರ ಮೇಲೆ ಮೂಡಬಿದ್ರೆ ಪೊಲೀಸ್ ಇನ್ ಸ್ಪೆಕ್ಟರ್ ದೌರ್ಜನ್ಯ ಎಸಗಿರುವ ಆರೋಪ ಪ್ರಕರಣದ ತನಿಖೆಯನ್ನು ಸಿಐಡಿಗೆ ವಹಿಸುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರಿಗೆ ಸೂಚನೆ ನೀಡಿದ್ದೇನೆ ಎಂದು ಗೃಹ ಸಚಿವ ಡಾ. ಜಿ.ಪರಮೇಶ್ವರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮೂಡುಬಿದರೆ ಘಟನೆಗೆ ಸಂಬಂಧಿಸಿದಂತೆ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಅವರು ಹಾಗೂ ಸಂತ್ರಸ್ತೆಯ ಭೇಟಿ ಮಾಡಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಅನೇಕ ವಿಚಾರಗಳ ಬಗ್ಗೆ ತಿಳಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಸಿಐಡಿ ತನಿಖೆಗೆ ವಹಿಸುವಂತೆ ಡಿಜಿಪಿ ಅವರಿಗೆ ಸೂಚಿಸಿದ್ದೇನೆ. ಮೂಡುಬಿದರೆ ಪೊಲೀಸ್ ಇನ್ ಸ್ಪೆಕ್ಟರ್ ಮೇಲೆ ಆರೋಪ ಬಂದ ಬಳಿಕ ಅಮಾನತು ಮಾಡುವ ಮೂಲಕ ತಕ್ಷಣದ ಕ್ರಮಕೈಗೊಳ್ಳಲಾಗಿದೆ.
ವರದಿ ನೀಡುವಂತೆ ಸೂಚಿಸಲಾಗಿದ್ದು, ಕೊಡುತ್ತಾರೆ. ಇನ್ನೂ ಅನೇಕ ವಿಚಾರಗಳನ್ನು ಕೇಳಿದ ಮೇಲೆ ಹೆಚ್ಚಿನ ತನಿಖೆ ಮಾಡಬೇಕೆಂದು ಸಿಐಡಿ ತನಿಖೆಗೆ ವಹಿಸಲಾಗಿದೆ. ತನಿಖೆ ಬಳಿಕ ಸತ್ಯಾಂಶ ಹೊರಬರುತ್ತದೆ. ಇನ್ನೂ ಎಷ್ಟು ಜನ ಸಂತ್ರಸ್ತರಿದ್ದಾರೆ ಎಂಬುದು ತನಿಖೆ ವೇಳೆ ಗೊತ್ತಾಗಲಿದೆ. ಇದಕ್ಕಾಗಿಯೇ ಸಿಐಡಿ ತನಿಖೆಗೆ ವಹಿಸಲಾಗಿದೆ ಎಂದು ಹೇಳಿದರು.