ದಕ್ಷಿಣ ಕನ್ನಡ, ಮಾ. 23 (DaijiworldNews/TA): ಕಳೆದ ಕೆಲವು ದಿನಗಳಿಂದ ದ.ಕ. ಜಿಲ್ಲೆಯಲ್ಲಿ ತಾಪಮಾನದಲ್ಲಿ ಏರಿಕೆ ಕಾಣುತ್ತಿದೆ. ಕೆಲವು ದಿನಗಳ ಹಿಂದೆ 39 ಡಿ.ಸೆ. ಉಷ್ಣಾಂಶ ದಾಖಲಾಗಿತ್ತು. ಮುಂದಿನ ದಿನಗಳಲ್ಲಿ ಬಿಸಿ ಗಾಳಿಯಿಂದಾಗಿ ಹೀಟ್ ಸ್ಟ್ರೋಕ್ ಗೆ ಒಳಗಾದವರಿಗೆ ಚಿಕಿತ್ಸೆ ನೀಡುವ ಉದ್ದೇಶದಿಂದ ಮುನ್ನೆಚ್ಚರಿಕೆಯಾಗಿ ಮಂಗಳೂರು ಸಹಿತ ಜಿಲ್ಲೆಯ ತಾಲೂಕು ಆಸ್ಪತ್ರೆಗಳಲ್ಲಿ ವಿಶೇಷ ಹಾಸಿಗೆ ಮೀಸಲಿರಿಸಲಾಗಿದೆ.

ಮಂಗಳೂರಿನ ವೆನ್ಲಾಕ್ ಆಸ್ಪತ್ರೆಯಲ್ಲಿ 5 ಹಾಸಿಗೆಯುಳ್ಳ ವಾರ್ಡ್ ಅನ್ನು ಸಜ್ಜುಗೊಳಿಸಲಾಗಿದೆ. ಬೆಳ್ತಂಗಡಿ, ಸುಳ್ಯ, ಪುತ್ತೂರು, ಬಂಟ್ವಾಳ ತಾಲೂಕು ಆಸ್ಪತ್ರೆಗಳಲ್ಲಿ ತಲಾ ಎರಡು ಹಾಸಿಗೆಯುಳ್ಳ ಚಿಕಿತ್ಸಾ ಕೊಠಡಿ ಸನ್ನದ್ಧಗೊಳಿಸಲಾಗಿದೆ. ಈ ಕೊಠಡಿಗಳಲ್ಲಿ ಔಷಧ, ಎ.ಸಿ. ಸಹಿತ ತುರ್ತು ಆವಶ್ಯಕತೆಗಳನ್ನು ಕಲ್ಪಿಸಲಾಗಿದೆ. ಇನ್ನು ಹೀಟ್ ವೇವ್ ಸಹಿತ ಬಿಸಿಲಿನ ಝಳ ಹೆಚ್ಚಿರುವ ಸಮಯದಲ್ಲಿ ಯಾವ ರೀತಿ ಮುನ್ನೆಚ್ಚರಿಕೆ ವಹಿಸಿ ಕೊಳ್ಳಬೇಕು ಎಂಬ ಬಗ್ಗೆ ಶಾಲಾ - ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಕೆಲಸ ಆಗಬೇಕು. ಈ ನಿಟ್ಟಿನಲ್ಲಿ ಜಿಲ್ಲೆಯ ಶಿಕ್ಷಣ ಇಲಾಖೆಗೆ ಆರೋಗ್ಯ ಇಲಾಖೆಯಿಂದ ಪತ್ರ ಬರೆಯಲಾಗುವುದು ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ| ತಿಮ್ಮಯ್ಯ ತಿಳಿಸಿದ್ದಾರೆ.
ಇನ್ನು ವಾತಾವರಣದಲ್ಲಿ ಅತಿಯಾದ ಶಾಖದ ಪರಿಣಾಮ ಮಕ್ಕಳ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದ್ದು, ಎಚ್ಚರ ಅಗತ್ಯ. ಅತೀ ಶಾಖದಿಂದಾಗಿ ಮಕ್ಕಳಲ್ಲಿ ಪ್ರಜ್ಞೆ ತಪ್ಪುವುದು, ಸ್ನಾಯುಗಳ ಸೆಳೆತ, ಅಪಸ್ಮಾರ, ತಲೆನೋವು, ಹೆಚ್ಚು ಬೆವರುವಿಕೆ, ಬಲಹೀನತೆ, ತಲೆ ಸುತ್ತುವುದು, ಗಲಿಬಿಲಿಗೊಂಡಂತೆ ಮಾತನಾಡುವುದು, ಉಸಿರಾಟ ಹಾಗೂ ಎದೆಬಡಿತದಲ್ಲಿ ಏರಿಕೆ, ವಾಕರಿಕೆ ಹಾಗೂ ವಾಂತಿಯಾಗುವುದು, ಹಾಸಿಗೆಯಿಂದ ಏಳಲು ಕಷ್ಟವಾಗುವುದು, ದೇಹದ ಉಷ್ಣತೆ 40.5 ಸೆ. ಗಿಂತ ಹೆಚ್ಚಾಗುತ್ತದೆ.
ಈ ರೀತಿಯ ಸಮಸ್ಯೆ ಕಂಡುಬಂದರೆ ಪ್ರಥಮ ಚಿಕಿತ್ಸೆಯಾಗಿ ಮಗುವಿನ ದೇಹವನ್ನು ಒದ್ದೆ ಬಟ್ಟೆಯಿಂದ ಒರೆಸಿರಿ, ಮಗುವನ್ನು ಮಲಗಿಸಿ, ಕಾಲನ್ನು ಸ್ವಲ್ಪ ಎತ್ತರದಲ್ಲಿರಿಸಿ, ಫ್ಯಾನ್ ಅನ್ನು ಬಳಸಿ, ಮಗುವಿಗೆ ಪ್ರಜ್ಞೆ ತಪ್ಪಿದ್ದಲ್ಲಿ ಕುಡಿಯಲು, ತಿನ್ನಲು ಕೊಡಬಾರದು, ತೀವ್ರ ರೋಗ ಲಕ್ಷಣ ಇದ್ದರೆ ತತ್ಕ್ಷಣ ಸಮೀಪದ ಆರೋಗ್ಯ ಕೇಂದ್ರಕ್ಕೆ ಕರೆದೊಯ್ಯಬೇಕು.