ಬೆಳ್ತಂಗಡಿ,ಫೆ. 19 (DaijiworldNews/AK): ಮಕ್ಕಳು ಮನೆಯ ಅಂಗಳದಲ್ಲಿ ಆಟವಾಡುತ್ತಿದ್ದ ವೇಳೆ ಸ್ಫೋಟಕವೊಂದು ಸ್ಫೋಟಗೊಂಡು ಬಾಲಕನೊಬ್ಬ ಗಾಯಗೊಂಡ ಘಟನೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ಬಂದಾರು ಗ್ರಾಮದಲ್ಲಿ ಮಂಗಳವಾರ ಸಂಜೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಬಂದಾರು ಗ್ರಾಮದ ಬಲಿಪೆ ನಿವಾಸಿಗಳಾದ ಮುಕುಂದ ಮತ್ತು ಜಯಶ್ರೀ ದಂಪತಿಯ ಪುತ್ರ ಅಭೀಶ್ (11) ಅವಘಡದಲ್ಲಿ ಸಣ್ಣಪುಟ್ಟ ಗಾಯಗಳೊಂದಿಗೆ ಪಾರಾದ ಬಾಲಕ.
ಮನೆಯ ಅಂಗಳದಲ್ಲಿ ಇಬ್ಬರು ಮಕ್ಕಳು ಆಟವಾಡುತ್ತಿದ್ದ ವೇಳೆ ಚೆಂಡಿನಂತಿದ್ದ ವಸ್ತುವೊಂದು ಪತ್ತೆಯಾಗಿದ್ದು, ಅದನ್ನು ತೆಗೆದುಕೊಂಡು ಕ್ರಿಕೆಟ್ ಆಡಲು ಮುಂದಾಗಿದ್ದಾರೆ. ಒಬ್ಬ ಬೌಲಿಂಗ್ ಮಾಡಿದ್ದು, ಇನ್ನೊಬ್ಬ ಬ್ಯಾಟಿಂಗ್ ಮಾಡಿದ ಸಂದರ್ಭ ಸ್ಫೋಟಗೊಂಡಿದೆ ಎನ್ನಲಾಗಿದೆ.
ಸ್ಪೋಟಗೊಂಡ ವಸ್ತು ಯಾರೋ ಕಿಡಿಗೇಡಿಗಳು ಯಾವುದೋ ಕಾಡು ಪ್ರಾಣಿಗಳ ಬೇಟೆಗಾಗಿ ಇಟ್ಟಿರುವ ಸ್ಟೋಟಕವೆಂದು ಹಾಗೂ ಸದ್ರಿ ಸ್ಫೋಟಕವನ್ನು ನಾಯಿಗಳು ಮನೆಯ ಅಂಗಳಕ್ಕೆ ತಂದು ಹಾಕಿರಬಹುದಾಗಿ ತಿಳಿದುಬಂದಿದೆ.