ಬಂಟ್ವಾಳ, ಫೆ. 19 (DaijiworldNews/TA): ನರೇಗಾ ಯೋಜನೆ ಹಲವು ಬಾರಿ ಹೆಸರು ಪರಿವರ್ತನೆ ಆಗಿದೆ. ನರೇಗಾದಲ್ಲಿರುವ ಕುಂದುಕೊರತೆ ನಿವಾರಿಸಿ ಯೋಜನೆ ಪರಿಷ್ಕರಿಸಲಾಗಿದೆ. 100 ದಿನ ಇದ್ದ ಉದ್ಯೋಗ 125 ದಿನ ಆಗಿರುವುದು ಲಾಭವಾ ನಷ್ಟವಾ ಎಂದು ಜನರು ತಿಳಿದುಕೊಳ್ಳಬೇಕು ಎಂದು ಬಂಟ್ವಾಳ ಶಾಸಕ ರಾಜೇಶ್ ನಾಯ್ಕ್ ಉಳಿಪ್ಪಾಡಿಗುತ್ತು ಹೇಳಿದರು.



ಅವರು ಬಂಟ್ವಾಳ ಮಂಡಲದ ವತಿಯಿಂದ ಹಮ್ಮಿಕೊಂಡ ಮಹಾತ್ಮ ಗಾಂಧಿ ನರೇಗಾ ಯೋಜನೆಯಲ್ಲಿನ ಭ್ರಷ್ಟಾಚಾರವನ್ನು ತೊಡೆದು ಹಾಕಲು ಹಾಗೂ ಕೇಂದ್ರ ಸರಕಾರದ ಹೊಸ ಕಾಯ್ದೆಯ ಬಗ್ಗೆ ಜನಜಾಗೃತಿ ಮೂಡಿಸಲು ಹಾಗೂ ಭ್ರಷ್ಟಾಚಾರ ಮುಕ್ತ ಆಡಳಿತಕ್ಕಾಗಿ ಹಮ್ಮಿಕೊಂಡ ಬೃಹತ್ ಪಾದಯಾತ್ರೆಯಲ್ಲಿ ಭಾಗವಹಿಸಿ ಮಾತನಾಡಿದರು.
ಬಂಟ್ವಾಳ ವಿಧಾನ ಸಭಾ ಕ್ಷೇತ್ರಲ್ಲಿನ ಬಹುತೇಕ ಗ್ರಾ.ಪಂ.ಗಳಲ್ಲಿ ಜಿ.ರಾಮ್ ಜಿ.ಕಾಯ್ದೆಯೇ ಬೇಕು ಎಂದು ನಿರ್ಣಯ ಮಾಡಿ ಸರಕಾರಕ್ಕೆ ಕಳುಹಿಸಿದ್ದಾರೆ ಇದು ಅತ್ಯಂತ ಸಂತಸದ ವಿಚಾರ ಎಂದು ಹೇಳಿದರು. ಕೈಕಂಬ ಪೊಳಲಿ ದ್ವಾರದಿಂದ ಬಿ.ಸಿ.ರೋಡಿನ ವರೆಗೆ ಬೃಹತ್ ಪಾದಯಾತ್ರೆ ನಡೆಯಿತು.
ಬಂಟ್ವಾಳ ಮಂಡಲದ ಅಧ್ಯಕ್ಷ ಆರ್.ಚೆನ್ನಪ್ಪ ಕೋಟ್ಯಾನ್ ಮಾಜಿ ಶಾಸಕ ಪದ್ಮನಾಭ ಕೊಟ್ಟಾರಿ, ಪಕ್ಷದ ಪ್ರಮುಖರಾದ ಸುದರ್ಶನ ಬಜ,ಶಿವಪ್ರಸಾದ್ ಶೆಟ್ಟಿ ಸೇರಿದಂತೆ ಪಕ್ಷದ ವಿವಿಧ ಜವಾಬ್ದಾರಿಯ ಪ್ರಮುಖರು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.