ಕಾಸರಗೋಡು, ಫೆ. 18 (DaijiworldNews/TA) : ವ್ಯಕ್ತಿಯೊಬ್ಬರು ತನ್ನ ವಿವಾಹ ಕಾರ್ಯಕ್ರಮ ವೇಳೆ ತಂದೆಯ ನೆನಪಿಗಾಗಿ ಅವರು ಬಳಸುತ್ತಿದ್ದ ಸ್ಕೂಟರ್ ಗೆ ಅಲಂಕಾರ ಮಾಡಿ, ವೇದಿಕೆಯ ಮೇಲಿರಿಸಿ ವಿಶೇಷ ರೀತಿಯಲ್ಲಿ ಗೌರವ ಸಲ್ಲಿಸಿದ ಅಪೂರ್ವ ಘಟನೆ ಕಾಸರಗೋಡಿನ ಬಜಕೂಡ್ಲುವಿನ ಪರ್ಪಕರಿಯದಲ್ಲಿ ನಡೆದಿದೆ.


ದಿವಂಗತ ಅಮ್ಮು ರೈ ಅವರ ಪುತ್ರ ನವೀನ್ ಅವರೇ ಸದ್ಯ ವಿನೂತನ ರೀತಿಯಲ್ಲಿ ವಿವಾಹವಾಗಿದ್ದಾರೆ. ಅಮ್ಮು ರೈ ಅವರು ಕೇರಳ ತೋಟಗಾರಿಕಾ ನಿಗಮದ ಗೇರು ತೋಟ ವಿಭಾಗದಲ್ಲಿ ಕೆಲಸ ನಿರ್ವಹಿಸಿ, ಬಳಿಕ ನಿವೃತ್ತರಾಗಿದ್ದರು. ಈ ದೀರ್ಘಕಾಲದ ಅವಧಿಯಲ್ಲಿ ಅಮ್ಮು ರೈ ಅವರು M 80 ಸ್ಕೂಟರ್ ಅನ್ನು ಬಳಸುತ್ತಿದ್ದರು. ಇನ್ನು ಕೆಲ ವರ್ಷಗಳ ಹಿಂದೆ ಅಮ್ಮು ರೈ ನಿಧನ ಹೊಂದಿದ್ದರು.
ಅಮ್ಮು ರೈ ಅವರ ನಿಧನದ ಬಳಿಕವೂ ಮನೆಮಂದಿ ಸ್ಕೂಟರ್ ಅನ್ನು ಮಾರಾಟ ಮಾಡದೆ, ಶುಚಿಯಾಗಿಟ್ಟು, ಮನೆಯಲ್ಲೇ ಇಟ್ಟುಕೊಂಡಿದ್ದರು. ಇನ್ನು ನವೀನ್ ಅವರ ವಿವಾಹ ಆದಿತ್ಯವಾರ ನಡೆದಿದ್ದು, ಈ ವೇಳೆ ವೇದಿಕೆಯಲ್ಲಿ ಇದೇ ಸ್ಕೂಟರ್ ಅನ್ನು ಇಟ್ಟು ವಿಶೇಷ ರೀತಿಯಲ್ಲಿ ಅಲಂಕಾರ ಮಾಡಿ ಇಟ್ಟು, ತಂದೆಯವರಿಗೆ ಅಪೂರ್ವ ರೀತಿಯಲ್ಲಿ ಗೌರವ ಸಲ್ಲಿಸಿದ್ದಾರೆ. ವಿವಾಹಕ್ಕೆ ಆಗಮಿಸಿದವರು ಈ ಅಪೂರ್ವ ದೃಶ್ಯವನ್ನು ನೋಡಿ ಕುಟುಂಬದ ಸದಸ್ಯರನ್ನು ಶ್ಲಾಘಿಸುತ್ತಿರುವುದು ಕಂಡುಬಂದಿತ್ತು.