ಉಳ್ಳಾಲ, ಫೆ. 16 (DaijiworldNews/TA): ರಾ.ಹೆ.66 ರ ಕಾಪಿಕಾಡು ಎಂಬಲ್ಲಿ ಇಂದು ಖಾಸಗಿ ಶಾಲಾ ಬಸ್ಸಿನ ಹಿಂಬದಿಗೆ ಮೀನು ಸಾಗಾಟದ ಕ್ಯಾಂಟರ್ ಒಂದು ಬಲವಾಗಿ ಢಿಕ್ಕಿ ಹೊಡೆದ ಘಟನೆ ನಡೆದಿದೆ. ಭೀಕರ ಅಪಘಾತದಲ್ಲಿ ಏಳು ಮಂದಿ ವಿದ್ಯಾರ್ಥಿಗಳು ಸಣ್ಣ,ಪುಟ್ಟ ಗಾಯಗಳೊಂದಿಗೆ ಪವಾಡ ಸದೃಶರಾಗಿ ಅಪಾಯದಿಂದ ಪಾರಾಗಿದ್ದಾರೆ.


ಕಾಪಿಕಾಡಿನ ಹೆದ್ದಾರಿ ಅಂಚಿನಲ್ಲಿ ವಿದ್ಯಾರ್ಥಿಗಳನ್ನ ಬಸ್ಸಿಗೆ ಹತ್ತಿಸಿ ತಲಪಾಡಿ ಕಡೆಗೆ ತೆರಳುತ್ತಿದ್ದಾಗ ಹಿಂದಿನಿಂದ ಧಾವಿಸಿ ಬಂದ ಮೀನಿನ ಕ್ಯಾಂಟರ್ ಬಲವಾಗಿ ಢಿಕ್ಕಿ ಹೊಡೆದಿದೆ. ಕ್ಯಾಂಟರ್ ಢಿಕ್ಕಿಯ ರಭಸಕ್ಕೆ ಶಾಲಾ ಬಸ್ಸಿನ ಹಿಂಭಾಗದ ಸೀಟುಗಳೇ ಕಿತ್ತು ಹೋಗಿವೆ. ಗೋವಾದಿಂದ ಕೇರಳದ ಕಡೆಗೆ ಕ್ಯಾಂಟರ್ ನಲ್ಲಿ ಮೀನು ಸಾಗಿಸುತ್ತಿದ್ದ ಕುಂದಾಪುರ ಮೂಲದ ಚಾಲಕ ಸಂಜೀವ ಎಂಬವರು ನಿದ್ರೆಯ ಮಂಪರಿನಲ್ಲಿದ್ದ ಪರಿಣಾಮ ಅಪಘಾತ ನಡೆದಿರುವುದಾಗಿ ತಿಳಿದು ಬಂದಿದೆ.
ಘಟನೆಯಿಂದ ಬಸ್ಸಿನೊಳಗಿದ್ದ ನಾಲ್ಕು ವಿದ್ಯಾರ್ಥಿಗಳು ಹಾಗೂ ಮೂರು ವಿದ್ಯಾರ್ಥಿನಿಯರು ಗಾಯಗೊಂಡಿದ್ದಾರೆ. ವಿದ್ಯಾರ್ಥಿಗಳಿಗೆ ತೊಕ್ಕೊಟ್ಟಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿದ್ದು ಚೇತರಿಸಿಕೊಂಡಿದ್ದಾರೆ. ಮತ್ತೋರ್ವ ವಿದ್ಯಾರ್ಥಿಯ ಕಾಲಿಗೆ ಗಂಭೀರ ಗಾಯವಾಗಿದ್ದು ಆತನನ್ನ ದೇರಳಕಟ್ಟೆಯ ಕೆ.ಎಸ್ ಹೆಗ್ಡೆ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ಪರೀಕ್ಷೆ ನಡೆಯುತ್ತಿದ್ದುದರಿಂದ ಬಸ್ಸಿನಲ್ಲಿ 24 ರಷ್ಟು ವಿದ್ಯಾರ್ಥಿಗಳಿದ್ದರು. ಘಟನೆಯಿಂದ ಕ್ಯಾಂಟರ್ ಚಾಲಕ ಸಂಜೀವ ಎಂಬವರು ಸಣ್ಣ ಪುಟ್ಟ ಗಾಯಗೊಂಡಿದ್ದು ತೊಕ್ಕೊಟ್ಟಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ. ಅಪಘಾತದ ಸುದ್ದಿ ತಿಳಿದು ವಿದ್ಯಾರ್ಥಿಗಳ ಪೋಷಕರು ಗಾಬರಿಗೊಂಡು ಆಸ್ಪತ್ರೆಯಲ್ಲಿ ಜಮಾಯಿಸಿದ್ದರು. ಸ್ಥಳಕ್ಕೆ ಧಾವಿಸಿದ ಮಂಗಳೂರು ದಕ್ಷಿಣ ಸಂಚಾರಿ ಠಾಣಾ ಪೊಲೀಸರು ಘಟನೆಯ ಬಗ್ಗೆ ಪರಿಶೀಲನೆ ನಡೆಸಿದ್ದಾರೆ.
ನಂತೂರು - ತಲಪಾಡಿ ಹೆದ್ದಾರಿ ಅಗಲೀಕರಣಗೊಂಡು ದಶಕ ಕಳೆದರೂ ಈ ಹೆದ್ದಾರಿಯಲ್ಲಿ ಸಮರ್ಪಕ ಸರ್ವಿಸ್ ರಸ್ತೆಗಳೇ ಇಲ್ಲದೆ ಶಾಲಾ ವಾಹನಗಳು, ಖಾಸಗಿ ಬಸ್ಸುಗಳು ಮುಖ್ಯ ಹೆದ್ದಾರಿ ಅಂಚಿನಲ್ಲೇ ನಿಲ್ಲಿಸಿ ಜನರನ್ನ ಪಿಕ್ ಅಪ್ ಮಾಡುತ್ತಿವೆ. ಹೆದ್ದಾರಿಯಲ್ಲಿ ಅಪರಿಮಿತ ವೇಗದಲ್ಲಿ ಸಾಗುವ ಸರಕು ವಾಹನಗಳ ಚಾಲಕರಿಗೆ ಇದರ ಅರಿವಿಲ್ಲದ ಕಾರಣ ನಿರಂತರ ಅಪಘಾತಗಳು ನಡೆಯುತ್ತಲೇ ಇವೆಯೆಂದು ಸ್ಥಳೀಯರು ಹೆದ್ದಾರಿ ಪ್ರಾಧಿಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.