ಬ್ರಹ್ಮಾವರ, ಫೆ. 15 (DaijiworldNews/AK): ಗೂಗಲ್ ಮ್ಯಾಪ್ ಎಡವಟ್ಟಿನಿಂದ ಕಾರೊಂದು ಹೊಳೆಗೆ ಬೀಳುವ ಸ್ಥಿತಿಗೆ ತಲುಪಿದ ಘಟನೆ ಶುಕ್ರವಾರ ರಾತ್ರಿ ಕೋಟ ಸಾಹೇಬ್ರಕಟ್ಟೆ ಮುಖ್ಯ ರಸ್ತೆಯ ಉಪ್ಲಾಡಿ ಹೊಳೆ ಬದಿಯಲ್ಲಿ ಸಂಭವಿಸಿದೆ.

ಮೂಲಗಳ ಪ್ರಕಾರ, ಕುಟುಂಬವು ಮೂಕಾಂಬಿಕಾ ದೇವಿಯ ಆಶೀರ್ವಾದ ಪಡೆಯಲು ಕೊಲ್ಲೂರಿಗೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಸಂಚರಿಸುತ್ತಿದ್ದ ವೇಳೆ ಗೂಗಲ್ ಮ್ಯಾಪ್ನಲ್ಲಿ ತೋರಿದ ಡೈವರ್ಶನ್ ಅನುಸರಿಸಿ ಬ್ರಹ್ಮಾವರ ಬಳಿ ಬಾರಕೂರು ಮಾರ್ಗವಾಗಿ ಸಾಹೇಬ್ರಕಟ್ಟೆ ಮೂಲಕ ಕೋಟದತ್ತ ಸಾಗಿತ್ತು. ಉಪ್ಲಾಡಿ ಹೊಳೆ ಸಮೀಪ ತಲುಪಿದಾಗ ಚಾಲಕನ ನಿಯಂತ್ರಣ ತಪ್ಪಿ ಕಾರು ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು, ನಂತರ ಹೊಳೆ ಬದಿಯ ಸಿಮೆಂಟ್ ಪಿಲ್ಲರ್ ಮೇಲೆ ಹತ್ತಿ ನಿಂತಿದೆ. ಹೊಳೆಗೆ ಕೇವಲ ಒಂದು ಅಡಿ ಅಂತರದಲ್ಲಿ ಕಾರು ನಿಂತಿದ್ದರಿಂದ ಭಾರಿ ದುರಂತ ತಪ್ಪಿದಂತಾಗಿದೆ
ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಐದು ಜನರು ಕಾರಿನಲ್ಲಿ ಪ್ರಯಾಣಿಸುತ್ತಿದ್ದರು. ಅದೃಷ್ಟವಶಾತ್, ಎಲ್ಲಾ ಪ್ರಯಾಣಿಕರು ಯಾವುದೇ ಗಾಯಗಳಿಲ್ಲದೆ ಪಾರಾಗಿದ್ದಾರೆ. ಮಾಹಿತಿ ಪಡೆದ ಕೋಟ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯರ ಸಹಾಯದಿಂದ ವಾಹನದೊಳಗಿದ್ದವರನ್ನು ಸುರಕ್ಷಿತವಾಗಿ ರಕ್ಷಿಸಲಾಗಿದೆ. ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.