ಉಡುಪಿ, ಫೆ. 13 (DaijiworldNews/AA): ಇಲ್ಲಿನ ಕುಂಜಿಬೆಟ್ಟುವಿನ 169ಎ ರ ಎಂಜಿಎಂ ಕಾಲೇಜು ಸಮೀಪ ಗುರುವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಗಂಭೀರವಾಗಿ ಗಾಯಗೊಂಡಿದ್ದ ದ್ವಿಚಕ್ರ ವಾಹನ ಸವಾರ ಮೃತಪಟ್ಟಿದ್ದಾರೆ.

ಮೃತರನ್ನು ಗೋಪಾಲ ಮೂಲ್ಯ (71) ಎಂದು ಗುರುತಿಸಲಾಗಿದೆ.
ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನ ಪ್ರಕಾರ, ಈ ಘಟನೆಯು ಗುರುವಾರ ಸಂಜೆ ಸುಮಾರು 4:30 ರ ಸುಮಾರಿಗೆ ಎಂಜಿಎಂ ಕಾಲೇಜಿನ ಮುಂಭಾಗದ ಹೈವೇ ಡೈವರ್ಷನ್ ಪಾಯಿಂಟ್ನಲ್ಲಿ ಸಂಭವಿಸಿದೆ.
ಘಟನೆಯ ವಿವರ:
ಗೋಪಾಲ್ ಮೂಲ್ಯ ಅವರು ಮಣಿಪಾಲದ ಕಡೆಗೆ ತಿರುಗಲು ಸಿಗ್ನಲ್ ನೀಡಿ ತಮ್ಮ ಬೈಕ್ ತಿರುಗಿಸುತ್ತಿದ್ದಾಗ, ಏಕಾಏಕಿ ಬುಲೆಟ್ ಸವಾರನೊಬ್ಬ ರಸ್ತೆಗೆ ನುಗ್ಗಿ ಅವರ ಸ್ಕೂಟರ್ಗೆ ಡಿಕ್ಕಿ ಹೊಡೆದಿದ್ದಾನೆ. ಢಿಕ್ಕಿಯ ರಭಸಕ್ಕೆ ನಿಯಂತ್ರಣ ತಪ್ಪಿದ ಗೋಪಾಲ್ ಅವರು ಬೈಕ್ ಸಮೇತ ರಸ್ತೆಗೆ ಬಿದ್ದಿದ್ದಾರೆ. ಅದೇ ಸಮಯದಲ್ಲಿ ಉಡುಪಿಯಿಂದ ಮಣಿಪಾಲದತ್ತ ಅತಿವೇಗವಾಗಿ ಬರುತ್ತಿದ್ದ ದೇವಿಪ್ರಸಾದ್ ಎಂಬವರು ಚಲಾಯಿಸುತ್ತಿದ್ದ ಬೊಲೆರೋ ವಾಹನವು ರಸ್ತೆಗೆ ಬಿದ್ದಿದ್ದ ಗೋಪಾಲ ಅವರ ಮೇಲೆ ಹರಿದಿದೆ.
ಗಂಭೀರವಾಗಿ ಗಾಯಗೊಂಡಿದ್ದ ಗೋಪಾಲ್ ಅವರನ್ನು ತಕ್ಷಣವೇ ಉಡುಪಿ ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಅವರ ತಲೆ, ಎದೆ ಮತ್ತು ಕೈಕಾಲುಗಳಿಗೆ ಗಂಭೀರ ಗಾಯಗಳಾಗಿದ್ದರಿಂದ ಅವರು ಅದಾಗಲೇ ಮೃತಪಟ್ಟಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಪ್ರಸ್ತುತ ಉಡುಪಿ ಸಂಚಾರಿ ಪೊಲೀಸ್ ಠಾಣೆಯಲ್ಲಿ ತಲೆಮರೆಸಿಕೊಂಡಿರುವ ಬುಲೆಟ್ ಸವಾರ ಮತ್ತು ಬೊಲೆರೋ ಚಾಲಕ ದೇವಿಪ್ರಸಾದ್ ವಿರುದ್ಧ ಪ್ರಕರಣ ದಾಖಲಾಗಿದೆ.