ಮಂಗಳೂರು, ಫೆ. 13 (DaijiworldNews/AA): ಚಲಿಸುತ್ತಿದ್ದ ಓಮ್ನಿ ವ್ಯಾನ್ನಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡಿದ್ದು, ಹಿಂದಿನಿಂದ ಬರುತ್ತಿದ್ದ ವಾಹನ ಸವಾರರ ಸಮಯಪ್ರಜ್ಞೆಯಿಂದಾಗಿ ಚಾಲಕ ಕೂದಲೆಳೆ ಅಂತರದಲ್ಲಿ ಪಾರಾಗಿರುವ ಘಟನೆ ಕೋಟೆಕಾರಿನ ಅಡ್ಕ ಎಂಬಲ್ಲಿ ಗುರುವಾರ ಸಂಭವಿಸಿದೆ.


ತಲಪಾಡಿ ನಿವಾಸಿ ರಿಯಾಜ್ ಎಂಬವರು ಗುರುವಾರ ಮಧ್ಯಾಹ್ನ ಅಡ್ಕದ ಗ್ಯಾರೇಜ್ನಿಂದ ರಿಪೇರಿ ಮುಗಿದಿದ್ದ ತಮ್ಮ ವ್ಯಾನ್ ಅನ್ನು ಪಡೆದುಕೊಂಡು ಬರುತ್ತಿದ್ದರು. ಪೆಟ್ರೋಲ್ ಬಂಕ್ನಲ್ಲಿ ಇಂಧನ ತುಂಬಿಸಿ ತಲಪಾಡಿಯತ್ತ ತೆರಳುತ್ತಿದ್ದಾಗ ವಾಹನದಲ್ಲಿ ಹೊಗೆ ಕಾಣಿಸಿಕೊಂಡಿದೆ. ಆದರೆ, ವಾಹನಕ್ಕೆ ಬೆಂಕಿ ತಗುಲಿರುವುದು ರಿಯಾಜ್ ಅವರ ಗಮನಕ್ಕೆ ಬಂದಿರಲಿಲ್ಲ. ಈ ವೇಳೆ ಹಿಂದಿನಿಂದ ಬರುತ್ತಿದ್ದ ಮತ್ತೊಬ್ಬ ವಾಹನ ಸವಾರರು ಬೆಂಕಿ ಕಾಣಿಸಿಕೊಂಡ ಬಗ್ಗೆ ರಿಯಾಜ್ ಅವರನ್ನು ಎಚ್ಚರಿಸಿದ್ದಾರೆ.
ಕೂಡಲೇ ರಿಯಾಜ್ ಅವರು ಹೈವೇ ಪಕ್ಕದಲ್ಲಿ ವಾಹನ ನಿಲ್ಲಿಸಿ ಹೊರಬಂದಿದ್ದಾರೆ. ಅವರು ವಾಹನದಿಂದ ಇಳಿಯುತ್ತಿದ್ದಂತೆಯೇ ಇಡೀ ವ್ಯಾನ್ ಬೆಂಕಿಗೆ ತುತ್ತಾಗಿ ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿದೆ. ಮಾಹಿತಿ ತಿಳಿಯುತ್ತಿದ್ದಂತೆಯೇ ಸ್ಥಳಕ್ಕೆ ಧಾವಿಸಿದ ಅಗ್ನಿಶಾಮಕ ಮತ್ತು ತುರ್ತು ಸೇವಾ ಸಿಬ್ಬಂದಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.