ಬಂಟ್ವಾಳ, ಫೆ. 13 (DaijiworldNews/AA): ಕುಕ್ಕಿಪಾಡಿ ಗ್ರಾಮದ ಕೆಂತಲೆ ಎಂಬಲ್ಲಿನ ಗುಡ್ಡವೊಂದರಲ್ಲಿ ಗುರುವಾರ ಆಕಸ್ಮಿಕ ಬೆಂಕಿ ಕಾಣಿಸಿಕೊಂಡಿದ್ದು, ಮರ-ಗಿಡಗಳು ಸುಟ್ಟು ಭಸ್ಮವಾಗಿದೆ.

ನಿತ್ಯಾನಂದ ಪೂಜಾರಿ ಎಂಬವರಿಗೆ ಸೇರಿದ ಜಾಗದಲ್ಲಿ ಈ ಅಗ್ನಿ ಅವಘಡ ಸಂಭವಿಸಿದ್ದು, ಘಟನಾ ಸ್ಥಳದಿಂದ ದಟ್ಟವಾದ ಹೊಗೆ ಆವರಿಸಿತ್ತು.
ಬೆಂಕಿ ಕಾಣಿಸಿಕೊಂಡ ತಕ್ಷಣ ನಿತ್ಯಾನಂದ ಅವರು ಬಂಟ್ವಾಳ, ಮೂಡುಬಿದಿರೆ ಮತ್ತು ಬೆಳ್ತಂಗಡಿ ಅಗ್ನಿಶಾಮಕ ಠಾಣೆಗಳಿಗೆ ಮಾಹಿತಿ ನೀಡಿದ್ದರು. ಆದರೆ, ಅಗ್ನಿಶಾಮಕ ಸಿಬ್ಬಂದಿ ಸ್ಥಳಕ್ಕೆ ಬರುವುದು ತಡವಾದ ಕಾರಣ, ಸ್ಥಳೀಯ ನಿವಾಸಿಗಳೇ ನೀರು ಹಾಯಿಸಿ ಬೆಂಕಿಯನ್ನು ನಂದಿಸುವಲ್ಲಿ ಯಶಸ್ವಿಯಾದರು.
ಸುಮಾರು ಒಂದೂವರೆ ಎಕರೆ ಪ್ರದೇಶಕ್ಕೆ ಬೆಂಕಿ ವ್ಯಾಪಿಸಿದ್ದು, ಕಾಡಿನ ಗಿಡ-ಮರಗಳು ಸಂಪೂರ್ಣವಾಗಿ ಸುಟ್ಟು ಭಸ್ಮವಾಗಿವೆ. ಅಷ್ಟೇ ಅಲ್ಲದೆ, ಬೆಂಕಿಯ ಕೆನ್ನಾಲಿಗೆಗೆ ಹಲವಾರು ಅಡಿಕೆ ಸಸಿಗಳು ಕೂಡ ನಾಶವಾಗಿವೆ ಎಂದು ನಿತ್ಯಾನಂದ ಪೂಜಾರಿ ತಿಳಿಸಿದ್ದಾರೆ.