ಬೆಳ್ತಂಗಡಿ, ಫೆ. 12 (DaijiworldNews/AA): ರಸ್ತೆ ಸುರಕ್ಷತಾ ನಿಯಮಗಳು ಮತ್ತು ಕಾನೂನು ನಿಬಂಧನೆಗಳನ್ನು ಗಾಳಿಗೆ ತೂರಿ, ಜೇನು ಕೃಷಿ ಅಧ್ಯಯನ ಪ್ರವಾಸಕ್ಕಾಗಿ ಶಾಲಾ ಮಕ್ಕಳನ್ನು ತೆರೆದ ಪಿಕ್ಅಪ್ ಮತ್ತು ಟಿಪ್ಪರ್ ಲಾರಿಗಳಲ್ಲಿ ಕರೆದೊಯ್ದ ಘಟನೆ ಬೆಳ್ತಂಗಡಿ ತಾಲೂಕಿನ ಬಳೆಂಜದಲ್ಲಿ ನಡೆದಿದ್ದು, ಸಾರ್ವಜನಿಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಇತ್ತೀಚೆಗಷ್ಟೇ ಶತಮಾನೋತ್ಸವವನ್ನು ಅದ್ಧೂರಿಯಾಗಿ ಆಚರಿಸಿದ್ದ ಬಳೆಂಜದ ಸರ್ಕಾರಿ ಉನ್ನತೀಕರಿಸಿದ ಹಿರಿಯ ಪ್ರಾಥಮಿಕ ಶಾಲೆಯ ಪ್ರಭಾರ ಮುಖ್ಯೋಪಾಧ್ಯಾಯರ ನೇತೃತ್ವದಲ್ಲಿ ಫೆಬ್ರವರಿ 10ರಂದು ಬೆಳಿಗ್ಗೆ ಈ ಘಟನೆ ನಡೆದಿದೆ. ಜೇನು ಕೃಷಿ ಅಧ್ಯಯನದ ಹೆಸರಿನಲ್ಲಿ ಮಕ್ಕಳನ್ನು ನಾಲ್ಕೂರು ಸಮೀಪದ ಅನಿಲ್ ಫಾರ್ಮ್ಗೆ ಪಿಕ್ಅಪ್ ಮತ್ತು ಟಿಪ್ಪರ್ ವಾಹನಗಳಲ್ಲಿ ಕರೆದೊಯ್ದು, ಬಳಿಕ ಶಾಲೆಗೆ ವಾಪಸ್ ಕರೆದುಕೋಂಡು ಬರಲಾಗಿತ್ತು ಎನ್ನಲಾಗಿದೆ.
ಈ ವಿಷಯ ತಿಳಿಯುತ್ತಿದ್ದಂತೆ ಆಕ್ರೋಶ ವ್ಯಕ್ತಪಡಿಸಿದ ಪೋಷಕರು ಶಾಲಾ ಸಿಬ್ಬಂದಿಯನ್ನು ಪ್ರಶ್ನಿಸಿದ್ದಾರೆ. "ಮೋಟಾರು ವಾಹನ ಕಾಯ್ದೆಯಡಿ ಕಾರ್ಮಿಕರನ್ನೇ ಇಂತಹ ಸರಕು ವಾಹನಗಳಲ್ಲಿ ಸಾಗಿಸಲು ಅನುಮತಿಯಿಲ್ಲದಿರುವಾಗ, ಶಾಲಾ ಮಕ್ಕಳನ್ನು ಈ ರೀತಿ ಕರೆದೊಯ್ದಿದ್ದು ಎಷ್ಟು ಸರಿ? ಒಂದು ವೇಳೆ ಅನಾಹುತ ಸಂಭವಿಸಿದ್ದರೆ ಅದಕ್ಕೆ ಯಾರು ಜವಾಬ್ದಾರರು?" ಎಂದು ಆಕ್ರೋಶ ಹೊರಹಾಕಿದ್ದಾರೆ.
ಮಕ್ಕಳನ್ನು ಅಪಾಯಕಾರಿ ರೀತಿಯಲ್ಲಿ ಕರೆದುಕೊಂಡು ಹೋಗುತ್ತಿರುವ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ. ಈ ಹಿನ್ನೆಲೆಯಲ್ಲಿ ಮುಖ್ಯೋಪಾಧ್ಯಾಯರು ಹಾಗೂ ವಾಹನಗಳ ಚಾಲಕರ ವಿರುದ್ಧ ಕಠಿಣ ಕಾನೂನು ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.