ಕುಂದಾಪುರ, ಫೆ. 12 (DaijiworldNews/AA): ಇಲ್ಲಿನ ನಾಡ ಗ್ರಾಮ ಪಂಚಾಯತ್ ಮುಂಭಾಗದ ಪ್ರಾಥಮಿಕ ಆರೋಗ್ಯ ಕೇಂದ್ರದ ಪಕ್ಕದಲ್ಲಿರುವ ಮೈದಾನದಲ್ಲಿ ಬುಧವಾರ ಮಧ್ಯಾಹ್ನ ಕಾಣಿಸಿಕೊಂಡ ಸುಳಿ ಗಾಳಿಯು ಸ್ಥಳೀಯರಲ್ಲಿ ಕೆಲಕಾಲ ಆತಂಕ ಸೃಷ್ಟಿಸಿತು.

ಮಧ್ಯಾಹ್ನದ ಸಮಯದಲ್ಲಿ ಬೀಸಿದ ಈ ಭಾರೀ ಸುಳಿ ಗಾಳಿಯು ಮೈದಾನದಲ್ಲಿದ್ದ ಧೂಳು ಮತ್ತು ಕಸಕಡ್ಡಿಗಳನ್ನು ಸ್ವಲ್ಪ ದೂರದವರೆಗೆ ಹಾರಿಸಿಕೊಂಡು ಹೋಯಿತು.
ಹಠಾತ್ತನೆ ಕಾಣಿಸಿಕೊಂಡ ಈ ಸುಳಿಗಾಳಿಯನ್ನು ಅಲ್ಲಿದ್ದ ಆಟೋ ರಿಕ್ಷಾ ಚಾಲಕರು, ಪಂಚಾಯತ್ ಸಿಬ್ಬಂದಿ, ಆರೋಗ್ಯ ಕೇಂದ್ರಕ್ಕೆ ಬಂದವರು ಹಾಗೂ ಸ್ಥಳೀಯ ನಿವಾಸಿಗಳ ಕುತೂಹಲಕ್ಕೆ ಕಾರಣವಾಯಿತು. ಕೆಲವರು ಈ ದೃಶ್ಯವನ್ನು ತಮ್ಮ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾರೆ.
ಈ ಹಿಂದೆ ಕಾರ್ಕಳ, ಮೂಡುಬಿದಿರೆ ಮತ್ತು ಮಲ್ಪೆ ಭಾಗಗಳಲ್ಲೂ ಇಂತಹ ಸುಳಿ ಗಾಳಿಗಳು ಕಾಣಿಸಿಕೊಂಡಿತ್ತು.