ಕಾಸರಗೋಡು, ಫೆ. 12 (DaijiworldNews/TA): ಕೇಂದ್ರ ಸರಕಾರದ ಕಾರ್ಮಿಕ ವಿರೋಧಿ ನೀತಿಯ ವಿರುದ್ಧ ಹಾಗೂ ಹತ್ತು ಹಲವು ಬೇಡಿಕೆಗಳ ಮುಂದಿಟ್ಟುಕೊಂಡು ಕಾರ್ಮಿಕ ಸಂಘಟನೆಗಳ ಸಂಯುಕ್ತ ಒಕ್ಕೂಟ ನಡೆಸುತ್ತಿರುವ ರಾಷ್ಟ್ರೀಯ ಮುಷ್ಕರಕ್ಕೆ ಕಾಸರಗೋಡು ಜಿಲ್ಲೆಯಲ್ಲಿ ಉತ್ತಮ ಪ್ರತಿಕ್ರಿಯೆ ಕಂಡುಬಂದಿದೆ. ಮುಷ್ಕರ ಹಿನ್ನೆಲೆಯಲ್ಲಿ ಕಾರ್ಮಿಕ ಸಂಘಟನೆಗಳ ನೇತೃತ್ವದಲ್ಲಿ ನಗರದಲ್ಲಿ ಪ್ರತಿಭಟನಾ ಮೆರವಣಿಗೆ ನಡೆದವು.

ಮುಷ್ಕರದಿಂದಾಗಿ ಜಿಲ್ಲೆಯಲ್ಲಿ ಕೆಎಸ್ಸಾರ್ಟಿಸಿ, ಖಾಸಗಿ ಬಸ್ ಗಳು ರಸ್ತೆಗಿಳಿಯಲಿಲ್ಲ. ಅಲ್ಲದೆ ಆಟೋ ಸಹಿತ ಟ್ಯಾಕ್ಸಿಗಳು ಸಹ ಸಂಚಾರ ನಡೆಸಲಿಲ್ಲ. ಉಳಿದಂತೆ ದ್ವಿಚಕ್ರ ವಾಹನಗಳು, ಖಾಸಗಿ ಕಾರುಗಳು ಸಂಚಾರ ನಡೆಸುತ್ತಿವೆ. ವಾಹನ ಸಂಚಾರವಿಲ್ಲದೆ ನಗರದ ವ್ಯಾಪಾರ ಸಂಸ್ಥೆಗಳು ಮುಚ್ಚಿವೆ.
ನಗರದಾದ್ಯಂತ ಅಂಗಡಿ ಮುಂಗಟ್ಟುಗಳು ಮುಚ್ಚಿಕೊಂಡಿವೆ. ಹೆಚ್ಚಿನ ಕಡೆಗಳಲ್ಲಿ ದ್ವಿಚಕ್ರ ವಾಹನ ಸಹಿತ ಖಾಸಗಿ ವಾಹನಗಳು ಓಡಾಟ ನಡೆಸಿದವು. ಗ್ರಾಮೀಣ ಕಡೆಗಳಲ್ಲಿ ಆಟೋರಿಕ್ಷಾಗಳು ಸಂಚಾರ ನಡೆಸುತ್ತಿವೆ. ಮುಷ್ಕರದಿಂದಾಗಿ ವಾಹನಗಳಿಲ್ಲದ ಹಿನ್ನೆಲೆಯಲ್ಲಿ ಕಚೇರಿಗಳಲ್ಲೂ ನೌಕರರ ಸಂಖ್ಯೆ ವಿರಳವಾಗಿದೆ.