ಉಡುಪಿ, ಫೆ. 11 (DaijiworldNews/AA): ಬನ್ನಂಜೆ ಗರಡಿಗೆ ಸಂಪರ್ಕಿಸುವ ರಸ್ತೆಯಲ್ಲಿರುವ ತಮ್ಮ ನಿವಾಸದ ಸಮೀಪದ ಬಾವಿಗೆ ಜಿಗಿದು ಬಸ್ ಏಜೆಂಟ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮಾನಸಿಕ ಖಿನ್ನತೆಯಿಂದಾಗಿ ಅವರು ಆತ್ಮಹತ್ಯೆಗೆ ಶರಣಾಗಿರಬಹುದು ಎಂದು ಶಂಕಿಸಲಾಗಿದೆ.

ಮೃತರನ್ನು ಕೆ. ರಾಜೇಶ್ ಶೆಣೈ ಎಂದು ಗುರುತಿಸಲಾಗಿದೆ.
ರಾಜೇಶ್ ಶೆಣೈ ಅವರು ಕಳೆದ ಕೆಲವು ಸಮಯದಿಂದ ಮಾನಸಿಕ ಒತ್ತಡದಿಂದ ಬಳಲುತ್ತಿದ್ದರು ಎನ್ನಲಾಗಿದೆ. ಬುಧವಾರದಂದು ಅವರು ಸಮೀಪದ ಬಾವಿಗೆ ಜಿಗಿದಿದ್ದು, ನೀರಿನಲ್ಲಿ ಮುಳುಗಿ ಮೃತಪಟ್ಟಿದ್ದಾರೆ.
ಈಶ್ವರ್ ಮಲ್ಪೆ ನೇತೃತ್ವದ ತಂಡವು ಬಾವಿಯಿಂದ ಮೃತದೇಹವನ್ನು ಹೊರತೆಗೆದಿದೆ. ನಂತರ ಸಮಾಜ ಸೇವಕ ನಿತ್ಯಾನಂದ ಒಳಕಾಡು ಅವರ ನೆರವಿನೊಂದಿಗೆ ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಜಿಲ್ಲಾ ಆಸ್ಪತ್ರೆಯ ಶವಾಗಾರಕ್ಕೆ ರವಾನಿಸಲಾಗಿದೆ.
ನಗರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ನಾರಾಯಣ ಮತ್ತು ಹೆಡ್ ಕಾನ್ಸ್ಟೆಬಲ್ ನೇತ್ರಾವತಿ ಅವರು ಸ್ಥಳಕ್ಕೆ ಭೇಟಿ ನೀಡಿ ಕಾನೂನು ಪ್ರಕ್ರಿಯೆಗಳನ್ನು ಪೂರ್ಣಗೊಳಿಸಿದರು.