ಮಂಗಳೂರು, ಫೆ. 10 (DaijiworldNews/TA): ವಾಮಂಜೂರು ಜಂಕ್ಷನ್ ಹಾಗೂ ಅದರ ಸುತ್ತಮುತ್ತಲ ರಾಷ್ಟ್ರೀಯ ಹೆದ್ದಾರಿಯಲ್ಲಿ ಸಾರ್ವಜನಿಕರ, ವಿಶೇಷವಾಗಿ ಪಾದಚಾರಿಗಳ ಜೀವ ಸುರಕ್ಷತೆ ಗಂಭೀರ ಅಪಾಯದಲ್ಲಿರುವ ಹಿನ್ನೆಲೆಯಲ್ಲಿ ಕಳೆದ ವಾರ ಸ್ಥಳೀಯರ ಪರವಾಗಿ ಹೈವೇ ಪ್ರಾಧಿಕಾರದ ಅಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು.


ಮನವಿಗೆ ಸ್ಪಂದಿಸಿದ ಹೈವೇ ಪ್ರಾಧಿಕಾರದ ಅಧಿಕಾರಿಗಳು ಇಂದು ವಾಮಂಜೂರು ಜಂಕ್ಷನ್ ಪ್ರದೇಶಕ್ಕೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು. ಈ ವೇಳೆ ಎಸ್ಡಿಪಿಐ ಮುಖಂಡರಾದ ಸೈಫುಲ್ಲಾ, ವಾಮಂಜೂರು ಮೂಡುಶೆಡ್ಡೆ ಗ್ರಾಮ ಸಮಿತಿ ಅಧ್ಯಕ್ಷ ರಿಯಾಝ್ ಹಾಗೂ ಮುಸ್ಲಿಂ ಯಂಗ್ಮೆನ್ಸ್ ಅಸೋಸಿಯೇಷನ್ ಸದಸ್ಯ ಎಫ್ಆರ್ಕೆ ಅವರ ನೇತೃತ್ವದಲ್ಲಿ ಸ್ಥಳೀಯ ನಿವಾಸಿಗಳು ವಿವಿಧ ಸುರಕ್ಷತಾ ಬೇಡಿಕೆಗಳನ್ನು ಅಧಿಕಾರಿಗಳ ಗಮನಕ್ಕೆ ತಂದರು.
ಸ್ಥಳೀಯರು ವಾಮಂಜೂರು ಜಂಕ್ಷನ್ ಬಳಿ ಶಾಶ್ವತ ಕ್ರಾಸಿಂಗ್ ವ್ಯವಸ್ಥೆ, ತಾತ್ಕಾಲಿಕ ಡಿವೈಡರ್ ಅಳವಡಿಕೆ, ಚರ್ಚ್ ಹಾಗೂ ಇಂಜಿನಿಯರಿಂಗ್ ಕಾಲೇಜು ಸಮೀಪ ಪಾದಚಾರಿಗಳಿಗಾಗಿ ಮೇಲ್ಸೇತುವೆ ನಿರ್ಮಾಣ ಹಾಗೂ ವಾಮಂಜೂರು ಜುಮಾ ಮಸೀದಿ ಬಳಿ ಸಮರ್ಪಕ ಡ್ರೈನೇಜ್ ವ್ಯವಸ್ಥೆ ಕಲ್ಪಿಸುವಂತೆ ಆಗ್ರಹಿಸಿದರು. ಸ್ಥಳ ಪರಿಶೀಲನೆ ನಡೆಸಿದ ಹೈವೇ ಪ್ರಾಧಿಕಾರದ ಅಧಿಕಾರಿಗಳು ಸಾರ್ವಜನಿಕರ ದೂರನ್ನು ಗಂಭೀರವಾಗಿ ಪರಿಗಣಿಸಿ, ಎಲ್ಲ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.