ಪುತ್ತೂರು, ಫೆ. 10 (DaijiworldNews/AK): ಫೆಬ್ರವರಿ 10 ರ ಮಂಗಳವಾರ ಮುಂಜಾನೆ ಚನ್ನರಾಯಪಟ್ಟಣ ಬಳಿ ಚಲಿಸುವ ರೈಲಿನಿಂದ ಬಿದ್ದು 25 ವರ್ಷದ ರಾಷ್ಟ್ರೀಯ ಮಟ್ಟದ ಕಬಡ್ಡಿ ಆಟಗಾರ ಸಾವನ್ನಪ್ಪಿದ ದುರಂತ ಘಟನೆ ನಡೆದಿದೆ.

ಮೃತಪಟ್ಟವರು ನಿಶಿತ್ ನಾಯ್ಕ್ ಎಂದು ಗುರುತಿಸಲಾಗಿದೆ. ಬೆಂಗಳೂರಿನ ಕಲ್ಯಾಣ್ ಜ್ಯುವೆಲ್ಲರ್ಸ್’ನಲ್ಲಿ ಉದ್ಯೋಗಿಯಾಗಿರುವ ನಿಶಿತ್ ಅವರು ಪುತ್ತೂರಿನ ವಿವೇಕಾನಂದ ಮಹಾವಿದ್ಯಾಲಯದ ಹಳೆ ವಿದ್ಯಾರ್ಥಿ. ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರನಾಗಿಯೂ ಗುರುತಿಸಿಕೊಂಡಿದ್ದರು.
ಮನೆಗೆ ಬರಲು ಸೋಮವಾರ ರಾತ್ರಿ ಬೆಂಗಳೂರಿನಿಂದ ಟ್ರೈನ್ ಹಿಡಿದಿದ್ದರು. ಜನರಲ್ ವಿಭಾಗದಲ್ಲಿ ಪ್ರಯಾಣಿಸುತ್ತಿದ್ದ ಅವರು, ಸುಮಾರು 2.30ರ ಹೊತ್ತಿಗೆ ರೈಲಿನಿಂದ ಎಸೆಯಲ್ಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಮೃತದೇಹ ಹಾಸನ ರೈಲ್ವೇ ಪೊಲೀಸರ ಸುಪರ್ಧಿಯಲ್ಲಿದೆ ಎಂದು ಹೇಳಲಾಗಿದೆ.ಮೃತರ ತಂದೆ ನಿವೃತ್ತ ಸೈನಿಕರಾಗಿದ್ದು, ತಂದೆ, ತಾಯಿ, ಸಹೋದರಿಯನ್ನು ಅಗಲಿದ್ದಾರೆ.