ಬಂಟ್ವಾಳ, ಫೆ. 08 (DaijiworldNews/AA): ವೃದ್ಧೆಯೊಬ್ಬರಿಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಸ್ಥಳದಲ್ಲೇ ಸಾವನ್ನಪ್ಪಿದ್ದು, ಸವಾರ ಗಂಭೀರವಾಗಿ ಗಾಯಗೊಂಡಿರುವ ಘಟನೆ ವಿಟ್ಲ ಬಸ್ ನಿಲ್ದಾಣದ ಬಳಿ ಭಾನುವಾರ ಬೆಳಿಗ್ಗೆ ನಡೆದಿದೆ.

ಮೃತರನ್ನು ವಿಟ್ಲದ ಮುಡ್ನೂರು ಗ್ರಾಮದ ಮರುವಾಳ ನಿವಾಸಿ ಸೀತಾ ಶೆಟ್ಟಿ(68) ಎಂದು ಗುರುತಿಸಲಾಗಿದೆ.
ಅತೀ ವೇಗವಾಗಿ ಬಂದ ಬೈಕ್ ಸೀತಾ ಶೆಟ್ಟಿ ಅವರಿಗೆ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವೃದ್ಧೆ ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ. ಢಿಕ್ಕಿ ಹೊಡೆದ ರಭಸಕ್ಕೆ ಬೈಕ್ ರಸ್ತೆಯಲ್ಲಿ ಸುಮಾರು 50 ಮೀಟರ್ ದೂರದವರೆಗೆ ಸ್ಕಿಡ್ ಆಗಿ ಬಿದ್ದಿದೆ.
ಪುತ್ತೂರು ಮೂಲದವನು ಎನ್ನಲಾದ ಬೈಕ್ ಸವಾರನಿಗೆ ಗಂಭೀರ ಗಾಯಗಳಾಗಿದ್ದು, ಹೆಚ್ಚಿನ ಚಿಕಿತ್ಸೆಗಾಗಿ ತಕ್ಷಣವೇ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಸದ್ಯ ಆತನ ಸ್ಥಿತಿ ಚಿಂತಾಜನಕವಾಗಿದೆ ಎಂದು ವರದಿಯಾಗಿದೆ.
ವಿಟ್ಲ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ಪ್ರಕರಣ ದಾಖಲಾಗಿದ್ದು, ಅಪಘಾತದ ನಿಖರ ಕಾರಣ ತಿಳಿಯಲು ತನಿಖೆ ಮುಂದುವರಿದಿದೆ.