ಉಡುಪಿ, ಫೆ. 08 (DaijiworldNews/AA): ತ್ರಿಚಕ್ರದ ಇಲೆಕ್ಟ್ರಿಕ್ ವೀಲ್ಚೇರ್ ವಾಹನಕ್ಕೆ ದ್ವಿಚಕ್ರ ವಾಹನವೊಂದು ಢಿಕ್ಕಿ ಹೊಡೆದ ಪರಿಣಾಮ ತ್ರಿಚಕ್ರ ವಾಹನ ಸವಾರ ಉಡುಪಿ ತಾಲೂಕಿನ ಪುತ್ತೂರು ನಿವಾಸಿಯಾಗಿರುವ ಉದ್ಯಮಿಯೊಬ್ಬರು ಸಾವನ್ನಪ್ಪಿದ್ದಾರೆ.

ಮೃತರನ್ನು ಪುತ್ತೂರು ನಿವಾಸಿ ಮಾಧವಮೂರ್ತಿ ಆಚಾರ್ಯ (61) ಎಂದು ಗುರುತಿಸಲಾಗಿದೆ.
ಪುತ್ತೂರು ಗ್ರಾಮದ ಶ್ರೀ ಓಂಕಾರೇಶ್ವರ ಭಜನಾ ಮಂದಿರದ ಮುಂಭಾಗದ ರಾಷ್ಟ್ರೀಯ ಹೆದ್ದಾರಿಯಲ್ಲಿ ಈ ಘಟನೆ ಸಂಭವಿಸಿದೆ. ಉಡುಪಿಯಿಂದ ಸಂತೆಕಟ್ಟೆ ಕಡೆಗೆ ಅತೀ ವೇಗವಾಗಿ ದ್ವಿಚಕ್ರ ವಾಹನ ಚಲಾಯಿಸುತ್ತಿದ್ದ ಶ್ರೀಹರಿರಾವ್ ಎಂಬುವವರು, ಮುಂದೆ ಚಲಿಸುತ್ತಿದ್ದ ಮೂರು ಚಕ್ರದ ಎಲೆಕ್ಟ್ರಿಕ್ ವೀಲ್ಚೇರ್ ವಾಹನಕ್ಕೆ ಢಿಕ್ಕಿ ಹೊಡೆದಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಢಿಕ್ಕಿಯ ರಭಸಕ್ಕೆ ಮಾಧವಮೂರ್ತಿ ಆಚಾರ್ಯ ಅವರು ವಾಹನದ ಸಮೇತ ರಸ್ತೆಗೆ ಬಿದ್ದಿದ್ದಾರೆ. ಪರಿಣಾಮ ಅವರ ತಲೆ ಮತ್ತು ದೇಹದ ಇತರ ಭಾಗಗಳಿಗೆ ಗಂಭೀರ ಗಾಯಗಳಾಗಿವೆ. ತಕ್ಷಣ ಅವರನ್ನು ಉಡುಪಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ, ಚಿಕಿತ್ಸೆ ಫಲಕಾರಿಯಾಗದೆ ಅವರು ಮೃತಪಟ್ಟಿದ್ದಾರೆ. ದ್ವಿಚಕ್ರ ವಾಹನ ಸವಾರ ಶ್ರೀಹರಿರಾವ್ ಅವರಿಗೂ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಸಂಚಾರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೆಚ್ಚಿನ ತನಿಖೆ ನಡೆಯುತ್ತಿದೆ.