ಮಂಗಳೂರು, ಫೆ. 08 (DaijiworldNews/TA): ಮಂಗಳೂರು-ಮೂಡಬಿದ್ರಿ ರಾಷ್ಟ್ರೀಯ ಹೆದ್ದಾರಿ 169ರ ಗುರುಪುರ ಕೈಕಂಬದಲ್ಲಿ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಅಗ್ರಹಿಸಿ ಗುರುಪುರ-ಕೈಕಂಬದ ಸಾರ್ವಜನಿಕರು ಫೆ.7ರಂದು ಹೆದ್ದಾರಿ ಕಾಮಗಾರಿ ತಡೆದು ಹಕ್ಕೋತ್ತಾಯ ಪ್ರತಿಭಟನೆ ನಡೆಸಿದರು.

ಪ್ರತಿಭಟನೆಯಲ್ಲಿ ಮಾತನಾಡಿದ ನ್ಯಾಯವಾದಿ ವಿಜಯ ಗೌಡ, ಗುರುಪುರ-ಕೈಕಂಬ ಪೇಟೆಯನ್ನು ವಿಭಾಗ ಮಾಡುವ ರೀತಿಯಲ್ಲಿ ಪೇಟೆಯ ನಡುವೆ ಗೋಡೆ ನಿರ್ಮಿಸಿ ಮಣ್ಣು ತುಂಬಿಸಿ ಹೆದ್ದಾರಿ ನಿರ್ಮಾಣವಾಗುತ್ತಿದೆ. ಇದರಿಂದ ಪೇಟೆಯ ವ್ಯಾಪಾರ-ವ್ಯವಹಾರಗಳಿಗೆ ಧಕ್ಕೆಯಾಗಲಿದೆ. ಅಲ್ಲದೇ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಾಣ ಮಾಡದೇ ಕಂದಾವರ, ಆದ್ಯಪಾಡಿಗೆ ಸಾಗುವವರು ಕಿಲೋಮೀಟರ್ ದೂರ ಸುತ್ತಿಬಳಸಿ ಸಂಚರಿಸುವ ಅನಿವಾರ್ಯತೆ ಬರಲಿದೆ. ಅಲ್ಲದೇ ಪ್ರಮುಖ ಪೇಟೆಯಲ್ಲಿ ಈ ರೀತಿ ಅವೈಜ್ಞಾನಿಕವಾಗಿ ಕಾಮಗಾರಿ ನಡೆಸಲಾಗುತ್ತಿದೆ. ವಾಮಂಜೂರಿನಲ್ಲಿ ಮಾಡಿದಂತೆ ಇಲ್ಲಿಯೂ ತೆರೆದ ಹೆದ್ದಾರಿ ಮಾಡಬೇಕು ಅಥವಾ ಮಾರುಕಟ್ಟೆ ಬಳಿ ಅಂಡರ್ ಪಾಸ್ ನಿರ್ಮಿಸಬೇಕು ಎಂದು ಒತ್ತಾಯಿಸಿದರು.
ವಿವಿಧ ಪಕ್ಷಗಳ, ಸಂಘಟನೆಗಳ ನೇತಾರರು, ಪೇಟೆಯ ಉದ್ಯಮಿಗಳು, ರಿಕ್ಷಾ ಚಾಲಕರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಇದ್ದರು. ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಗುರುಪುರ ನಾಡಕಚೇರಿ ಉಪ ತಹಶೀಲ್ದಾರ್ ಸ್ಟೀಪನ್ ಸಾರ್ವಜನಿಕರಿಂದ ಮನವಿ ಸ್ವೀಕರಿಸಿ ಮೇಲಾಧಿಕಾರಿಗಳಿಗೆ ಮನವಿಯನ್ನು ತಲುಪಿಸಿ ಸಾರ್ವಜನಿಕರ ಬೇಡಿಕೆ ಈಡೇರಿಕೆಗೆ ಮನವಿ ಮಾಡುವುದಾಗಿ ಭರವಸೆ ನೀಡಿದರು. ಬಜಪೆ ಪೊಲೀಸರು ಭದ್ರತೆ ಒದಗಿಸಿದ್ದರು.