ಉಡುಪಿ, ಫೆ. 05 (DaijiworldNews/AA): ಕಲ್ಸಂಕ ಮತ್ತು ಮಣಿಪಾಲದ ಸಿಂಡಿಕೇಟ್ ಸರ್ಕಲ್ನಲ್ಲಿ ಸಂಚಾರಿ ಸಿಗ್ನಲ್ ವ್ಯವಸ್ಥೆಯ ಯಶಸ್ವಿ ಅನುಷ್ಠಾನದ ನಂತರ, ಉಡುಪಿ ಪೊಲೀಸ್ ಇಲಾಖೆಯು ಈ ಯೋಜನೆಯನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ನಿರ್ಧರಿಸಿದೆ. ಇದರ ಭಾಗವಾಗಿ ಬಲಾಯಿಪಾದೆ ಮತ್ತು ಅಂಬಾಗಿಲು ಜಂಕ್ಷನ್ಗಳಲ್ಲಿ ಕಾಮಗಾರಿ ಶೀಘ್ರದಲ್ಲೇ ಆರಂಭವಾಗಲಿದ್ದು, ಮುಂದಿನ ಹಂತದಲ್ಲಿ ಇನ್ನು ನಾಲ್ಕು ಜಂಕ್ಷನ್ಗಳನ್ನು ಒಳಗೊಳ್ಳಲಿದೆ.







"ಹೊಸ ಯೋಜನೆಯಡಿ ಜಿಲ್ಲೆಯ ಬಲಾಯಿಪಾದೆ, ಅಂಬಾಗಿಲು, ಪಡುಬಿದ್ರಿ, ಬ್ರಹ್ಮಾವರ ಆಕಾಶವಾಣಿ, ಕೋಟ ಮೂರ್ಕೈ ಹಾಗೂ ಕುಂದಾಪುರದ ಸಂಗಮ್ ಈ ಆರು ಜಂಕ್ಷನ್ ಬಳಿ ಸಿಗ್ನಲ್ಗಳನ್ನು ಅಳವಡಿಸಲಾಗುವುದು. ಜಿಲ್ಲೆಯ ಭದ್ರತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಪ್ರಮುಖ ರಸ್ತೆಗಳು, ಜನನಿಬಿಡ ಪ್ರದೇಶಗಳು ಮತ್ತು ಪ್ರವಾಸಿ ತಾಣಗಳಲ್ಲಿ ಸುಮಾರು 250 ರಿಂದ 300 ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲು ನಿರ್ಧರಿಸಲಾಗಿದೆ" ಎಂದು ಎಸ್ಪಿ ಹರಿರಾಮ್ ಶಂಕರ್ ತಿಳಿಸಿದ್ದಾರೆ
"ಈಗಾಗಲೇ ಟೆಂಡರ್ ಪ್ರಕ್ರಿಯೆಗಳು ಮುಗಿದಿದ್ದು, ಮುಂದಿನ 3-4 ತಿಂಗಳಲ್ಲಿ ಉಡುಪಿ ಜಿಲ್ಲೆಯು ಸಂಪೂರ್ಣವಾಗಿ ಸಿಸಿಟಿವಿ ಕಣ್ಗಾವಲಿಗೆ ಒಳಪಡಲಿದೆ. ಈ ಕ್ಯಾಮೆರಾಗಳ ನೇರ ದೃಶ್ಯಗಳು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ ಕಚೇರಿಯಲ್ಲಿ ಲಭ್ಯವಿರಲಿವೆ" ಎಂದು ಹೇಳಿದರು.
"ರಾಷ್ಟ್ರೀಯ ಹೆದ್ದಾರಿಯಿಂದ ನಗರಕ್ಕೆ ಪ್ರವೇಶಿಸುವ ಬಲಾಯಿಪಾದೆ ಮತ್ತು ಅಂಬಾಗಿಲು ಜಂಕ್ಷನ್ಗಳಲ್ಲಿ ಅಪಘಾತಗಳು ಹೆಚ್ಚಾಗಿ ಸಂಭವಿಸುತ್ತಿದ್ದವು. ಇದನ್ನು ತಡೆಯಲು ಇಲ್ಲಿ ಆದ್ಯತೆಯ ಮೇಲೆ ಸಿಗ್ನಲ್ ಅಳವಡಿಸಲಾಗುತ್ತಿದೆ. ಹಳೆಯ ಟ್ರಾಫಿಕ್ ಸಿಗ್ನಲ್ ಕಂಬಗಳನ್ನು ಸಿಸಿಟಿವಿ ಕ್ಯಾಮೆರಾ ಅಳವಡಿಸಲು ಮರುಬಳಕೆ ಮಾಡಲಾಗುವುದು. ಅಳವಡಿಸಲಾದ ಕ್ಯಾಮೆರಾಗಳು 4-5 ವರ್ಷಗಳವರೆಗೆ ಸುಸ್ಥಿತಿಯಲ್ಲಿರುವಂತೆ ವಾರ್ಷಿಕ ನಿರ್ವಹಣೆಯ ಜವಾಬ್ದಾರಿಯನ್ನು ಟೆಂಡರ್ನಲ್ಲಿ ನೀಡಲಾಗಿದೆ" ಎಂದು ಮಾಹಿತಿ ನೀಡಿದರು.
"ಬಲಾಯಿಪಾದೆ ಮತ್ತು ಅಂಬಾಗಿಲು ಜಂಕ್ಷನ್ಗಳ ಸಿಗ್ನಲ್ಗಳು ಮುಂದಿನ 2 ರಿಂದ 3 ವಾರಗಳಲ್ಲಿ ಸಂಪೂರ್ಣವಾಗಿ ಕಾರ್ಯಾಚರಿಸಲಿವೆ. ಉಡುಪಿ ನಗರ ಸಭೆಯ ಸಹಯೋಗದೊಂದಿಗೆ ಈ ಎಲ್ಲಾ ಕಾಮಗಾರಿಗಳು ನಡೆಯುತ್ತಿವೆ" ಎಂದರು.