ಉಡುಪಿ, ಫೆ. 01 (DaijiworldNews/AA): ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಮಂಡಿಸಿದ 2026-27ನೇ ಸಾಲಿನ ಕೇಂದ್ರ ಬಜೆಟ್ ಉಡುಪಿ ಜಿಲ್ಲೆಯ ರಾಜಕೀಯ ನಾಯಕರು ಮಿಶ್ರ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ಬಿಜೆಪಿ ನಾಯಕರು ಇದನ್ನು "ಜನಸ್ನೇಹಿ ಮತ್ತು ದೂರದೃಷ್ಟಿಯ ಬಜೆಟ್" ಎಂದು ಬಣ್ಣಿಸಿದರೆ, ಕಾಂಗ್ರೆಸ್ ಕರ್ನಾಟಕವನ್ನು ನಿರ್ಲಕ್ಷಿಸಲಾಗಿದೆ ಎಂದು ಟೀಕಿಸಿದೆ.

ಇದು ಆರ್ಥಿಕ ಸಬಲೀಕರಣದ ಬಜೆಟ್: ಸಂಸದ ಕೋಟ ಶ್ರೀನಿವಾಸ ಪೂಜಾರಿ
ಬಜೆಟ್ ಅನ್ನು ಸ್ವಾಗತಿಸಿದ ಉಡುಪಿ-ಚಿಕ್ಕಮಗಳೂರು ಸಂಸದ ಕೋಟ ಶ್ರೀನಿವಾಸ ಪೂಜಾರಿ, ಇದು ದೇಶದ ಆರ್ಥಿಕತೆಯನ್ನು ಬಲಪಡಿಸುವ ಬಜೆಟ್ ಎಂದಿದ್ದಾರೆ. "ಮಹಿಳಾ ಉದ್ಯಮಿಗಳನ್ನು ಉತ್ತೇಜಿಸಲು 'SHE-MART' ಯೋಜನೆ ಮತ್ತು ಹೆಣ್ಣು ಮಕ್ಕಳಿಗಾಗಿ ಹಾಸ್ಟೆಲ್ ನಿರ್ಮಾಣದ ಮೂಲಕ ಮಹಿಳಾ ಸಬಲೀಕರಣಕ್ಕೆ ಒತ್ತು ನೀಡಲಾಗಿದೆ. ಅಪರೂಪದ ಕಾಯಿಲೆಗಳ ಚಿಕಿತ್ಸೆಗೆ ಸುಂಕ ವಿನಾಯಿತಿ ನೀಡುವ ಮೂಲಕ ಆರೋಗ್ಯ ಕ್ಷೇತ್ರಕ್ಕೆ ಆದ್ಯತೆ ನೀಡಲಾಗಿದೆ. ಹೈಸ್ಪೀಡ್ ರೈಲು ಕಾರಿಡಾರ್, ರಾಷ್ಟ್ರೀಯ ಹೆದ್ದಾರಿ, ಕೃಷಿ, ಮೀನುಗಾರಿಕೆ ಮತ್ತು ಸೌರಶಕ್ತಿಗೆ ಹೆಚ್ಚಿನ ಒತ್ತು ನೀಡಲಾಗಿದ್ದು, ಇಡೀ ರಾಷ್ಟ್ರದ ಹಿತದೃಷ್ಟಿಯಿಂದ ಈ ಬಜೆಟ್ ರೂಪಿಸಲಾಗಿದೆ" ಎಂದು ಅವರು ತಿಳಿಸಿದರು.
ಯುವ ಭಾರತ ನಿರ್ಮಾಣಕ್ಕೆ ಬುನಾದಿ: ಶಾಸಕ ಯಶ್ಪಾಲ್ ಸುವರ್ಣ
ಉಡುಪಿ ಶಾಸಕ ಯಶ್ಪಾಲ್ ಸುವರ್ಣ ಮಾತನಾಡಿ, "ನಿರ್ಮಲಾ ಸೀತಾರಾಮನ್ ಅವರು ತಮ್ಮ 9ನೇ ಬಜೆಟ್ ಮೂಲಕ ದೇಶದ ಆರ್ಥಿಕತೆಗೆ ಹೊಸ ಚೈತನ್ಯ ನೀಡಿದ್ದಾರೆ. ಏಳು ಹೈಸ್ಪೀಡ್ ರೈಲು ಕಾರಿಡಾರ್ಗಳು, ರಕ್ಷಣಾ ಕ್ಷೇತ್ರಕ್ಕೆ ಆದ್ಯತೆ, ಐಟಿ ಕಂಪನಿಗಳ ಮೂಲಕ ಯುವಕರಿಗೆ ಉದ್ಯೋಗಾವಕಾಶ ಮತ್ತು ವಿಶ್ವವಿದ್ಯಾಲಯ ಟೌನ್ಶಿಪ್ಗಳಂತಹ ಯೋಜನೆಗಳು 'ವಿಕಸಿತ ಭಾರತ'ದ ಕನಸಿಗೆ ಪೂರಕವಾಗಿವೆ. ಭಾರತವನ್ನು ವಿಶ್ವದ 3ನೇ ಅತಿದೊಡ್ಡ ಆರ್ಥಿಕತೆಯನ್ನಾಗಿ ಮಾಡಲು ಈ ಬಜೆಟ್ ಸಹಕಾರಿ" ಎಂದರು.
ಸರ್ವತೋಮುಖ ಅಭಿವೃದ್ಧಿಗೆ ಪೂರಕ: ಶಾಸಕ ಸುನಿಲ್ ಕುಮಾರ್
ಕಾರ್ಕಳ ಶಾಸಕ ವಿ. ಸುನಿಲ್ ಕುಮಾರ್ ಅವರು, "ಈ ಬಜೆಟ್ ಕರ್ನಾಟಕ ಸೇರಿದಂತೆ ಇಡೀ ದೇಶದ ಸರ್ವತೋಮುಖ ಅಭಿವೃದ್ಧಿಗೆ ಪೂರಕವಾಗಿದೆ. ಐಟಿ ನಾವೀನ್ಯತೆ, ಪ್ರವಾಸೋದ್ಯಮ ವಿಸ್ತರಣೆ ಮತ್ತು ಎಂಎಸ್ಎಂಇ ವಲಯಕ್ಕೆ ನೀಡಿರುವ ಆದ್ಯತೆಯು ಭವಿಷ್ಯದ ಕರ್ನಾಟಕವನ್ನು ನಿರ್ಮಿಸಲು ಭದ್ರ ಬುನಾದಿ ಹಾಕಿದೆ. ಪರಿಸರ ಸಮತೋಲನಕ್ಕೆ ನೀಡಿರುವ ಒತ್ತು ಕೇಂದ್ರ ಸರ್ಕಾರದ ಸೂಕ್ಷ್ಮತೆಯನ್ನು ತೋರಿಸುತ್ತದೆ" ಎಂದು ಹೇಳಿದರು.
ಸಾಮಾನ್ಯ ಜನರ ಹಿತ ಕಾಯುವ ಬಜೆಟ್: ಶಾಸಕ ಗುರ್ಮೆ ಸುರೇಶ್ ಶೆಟ್ಟಿ
ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಅವರು, "ಖೇಲೋ ಇಂಡಿಯಾ ಮಿಷನ್, ಟೈರ್-2 ಮತ್ತು ಟೈರ್-3 ನಗರಗಳ ಅಭಿವೃದ್ಧಿ ಹಾಗೂ ಖಾದಿ ವಲಯ ಬಲಪಡಿಸಲು 'ಮಹಾತ್ಮ ಗಾಂಧಿ ಗ್ರಾಮ ಸ್ವರಾಜ್' ಯೋಜನೆಗಳು ಅತ್ಯಂತ ಶ್ಲಾಘನೀಯ. ಗ್ರಾಮೀಣ ಮಹಿಳೆಯರಿಗಾಗಿ ಘೋಷಿಸಲಾದ 'SHE-MART' ಯೋಜನೆ ನಾರಿ ಶಕ್ತಿಯ ಸಬಲೀಕರಣಕ್ಕೆ ಸಾಕ್ಷಿಯಾಗಿದೆ" ಎಂದು ಬಜೆಟ್ ಅನ್ನು ಸ್ವಾಗತಿಸಿದರು.
ದೂರದೃಷ್ಟಿಯ ಬಜೆಟ್: ಕುತ್ಯಾರು ನವೀನ್ ಶೆಟ್ಟಿ
ಬಿಜೆಪಿ ಜಿಲ್ಲಾಧ್ಯಕ್ಷ ಕುತ್ಯಾರು ನವೀನ್ ಶೆಟ್ಟಿ ಅವರು ಬಜೆಟ್ ಅನ್ನು "ಕರ್ತವ್ಯ ಕೇಂದ್ರಿತ ಮತ್ತು ಸಮಗ್ರ" ಎಂದು ಬಣ್ಣಿಸಿದರು. 2047ರ ವೇಳೆಗೆ ವಿಕಸಿತ ಭಾರತ ಗುರಿ ತಲುಪಲು ಇದು ಸಹಕಾರಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಕಾಂಗ್ರೆಸ್ ಟೀಕೆ: ಕರ್ನಾಟಕಕ್ಕೆ ಮತ್ತೊಮ್ಮೆ ಅನ್ಯಾಯ - ರಮೇಶ್ ಕಾಂಚನ್
ಉಡುಪಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ರಮೇಶ್ ಕಾಂಚನ್ ಅವರು ಬಜೆಟ್ ಅನ್ನು ತೀವ್ರವಾಗಿ ಟೀಕಿಸಿದ್ದು, "ಕರ್ನಾಟಕ ಮತ್ತು ಕರಾವಳಿ ಜಿಲ್ಲೆಗಳಿಗೆ ಈ ಬಜೆಟ್ನಲ್ಲಿ ಯಾವುದೇ ಹೊಸ ಯೋಜನೆಗಳಿಲ್ಲ. ಇದು ಕೇವಲ ದೊಡ್ಡ ಉದ್ಯಮಿಗಳಿಗೆ ಮಾತ್ರ ಲಾಭದಾಯಕವಾಗಿದೆ" ಎಂದು ಆರೋಪಿಸಿದ್ದಾರೆ.
"ಕರಾವಳಿಯ ಮೀನುಗಾರಿಕೆ, ಪ್ರವಾಸೋದ್ಯಮ ಮತ್ತು ಬಂದರು ಅಭಿವೃದ್ಧಿಯ ಬಗ್ಗೆ ಭಾರಿ ನಿರೀಕ್ಷೆಗಳಿದ್ದವು, ಆದರೆ ನಿರ್ಮಲಾ ಸೀತಾರಾಮನ್ ಅವರು ರಾಜ್ಯದಿಂದ ರಾಜ್ಯಸಭೆಗೆ ಆಯ್ಕೆಯಾಗಿದ್ದರೂ ಕರ್ನಾಟಕಕ್ಕೆ ನ್ಯಾಯ ಒದಗಿಸಲು ವಿಫಲರಾಗಿದ್ದಾರೆ. ಪಿಎಂ ಕಿಸಾನ್ ಯೋಜನೆಯಡಿ ಆರ್ಥಿಕ ನೆರವು ಹೆಚ್ಚಾಗುತ್ತದೆ ಎಂಬ ಭರವಸೆಯೂ ಹುಸಿಯಾಗಿದೆ. ಚುನಾವಣೆ ನಡೆಯಲಿರುವ ಪಶ್ಚಿಮ ಬಂಗಾಳ, ಕೇರಳದಂತಹ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿ, ಕರ್ನಾಟಕವನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ" ಎಂದು ಅವರು ಆಕ್ರೋಶ ವ್ಯಕ್ತಪಡಿಸಿದರು.